ಶಿವಮೊಗ್ಗ : ಮನುಷ್ಯ ಆರ್ಥಿಕ ಬಲಾಢ್ಯನಾಗಿ, ವಿದ್ಯಾವಂತನಾಗಿದ್ದರು ಸಹ, ಮನಸ್ಸು ವಿಕಾಸಗೊಳ್ಳದೆ ವಿಕೃತವಾಗುತ್ತಿದ್ದೇವೆ ಎಂದು ವಿಶ್ರಾಂತ ಪ್ರಾಚಾರ್ಯರಾದ ಪ್ರೊ ರಾಮಪ್ಪಗೌಡರು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಪ್ರತಿ ತಿಂಗಳು ಏರ್ಪಡಿಸುವ ಸಾಹಿತ್ಯ ಹುಣ್ಣಿಮೆಯ 234 ನೇ ತಿಂಗಳ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಬಡಾವಣೆ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಸಜ್ಜನರು, ಸತ್ ಪ್ರಜೆಗಳನ್ನು ರೂಪಿಸುವ ಮನಸ್ಸು ಕಟ್ಟುವ ಕೆಲಸ ಆಗಬೇಕು. ನೂರಾರು ವಿದ್ಯಾಸಂಸ್ಥೆಗಳಿವೆ, ವಿಶ್ವವಿದ್ಯಾಲಯಗಳಿವೆ. ಅವುಗಳ ಕೆಲಸವನ್ನು ಇಂತಹ ಸಂಸ್ಥೆಗಳು ಮಾಡುತ್ತಿವೆ. ಇದರ ಅಗತ್ಯ ಬಹಳ ಮುಖ್ಯವಾಗಿದೆ . ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಎಲ್ಲಾ ಜಂಜಾಟ ಮರೆತು ಹಾಡು, ಸಂಗೀತ ಸಾಹಿತ್ಯ ಸಹವಾಸದಿಂದ ಉಲ್ಲಾಸಿತರಾಗಿದ್ದೇವೆ. ನಾವೆಲ್ಲರೂ ಒಂದೇ, ಇಲ್ಲಿ ಯಾವುದೇ ಭೇದವಿಲ್ಲದೆ ಸೇರಿದ್ದೇವೆ ಎಂದು ವಿವರಿಸಿದರು. ಮೆಚ್ಚುಗೆ ವ್ಯಕ್ತಪಡಿಸಿದರು.
ಆಶಯ ಮಾತುಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ, ಸಾಹಿತ್ಯ ಹುಣ್ಣಿಮೆ ಜನರ ಬಳಿಹೋಗಿ ಸಾಹಿತ್ಯ, ಸಂಗೀತದ ಮೂಲಕ ಮನಸ್ಸು ಕಟ್ಟುವ ಉದ್ದೇಶ ಹೊಂದಿದೆ. ಇಪ್ಪತ್ತು ವರ್ಷಗಳ ಹಿಂದೆ ಆರಂಭಿಸಿದ ಈ ಕಾರ್ಯಕ್ರಮ ಸಾವಿರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ. ನಮ್ಮ ಜಿಲ್ಲೆಯ ಸಾಕ್ಷಿ ಪ್ರಜ್ಞೆಯಾಗಿದೆ. ಅದು ಈ ನೆಲದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಯುವ ಮುಖಂಡ ಜಿ. ಡಿ. ಮಂಜುನಾಥ ಮಾತನಾಡಿ, ಜನರಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಲು ನಿರಂತರ ಪ್ರಯತ್ನವಾಗಿದೆ. ಕರ್ನಾಟಕ ಜಾನಪದ ಪರಿಷತ್ತು ಕಟ್ಟಿ ಬೆಳೆಸುವ ಮೂಲಕ ಜನಪದ ಕ್ಷೇತ್ರಕ್ಕೆ ಅವರ ಸಂಘಟನಾ ಶಕ್ತಿ ಕೊಡುಗೆಯಾಗಿದೆ ಎಂದರು. ಪೋಲಿಸ್ ನಿವಾಸಿಗಳ ಸಂಘದ ಅಧ್ಯಕ್ಷರಾದ ಟಿ. ಕುಪ್ಪಯ್ಯ ತಂದೆ ತಾಯಿ ಗಳು ಕನ್ನಡ ಪ್ರೇಮ ಹೊಸ ತಲೆಮಾರಿನ ಇಂಗ್ಲಿಷ್ ವ್ಯಾಮೋಹದಿಂದ ನಮ್ಮ ಸಂಸ್ಕೃತಿಯನ್ನು ನಾವೆ ಕಡೆಗಣಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಅಧ್ಯಕ್ಷರಾಗಿರುವ ಶಾಂತಾಶೆಟ್ಟಿ ಅವರು ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳಸಲು ಹಿರಿಯರಾದ ನಾವೇ ಜವಾಬ್ದಾರಿ ಹೊರಬೇಕಿದೆ ಎಂದರು.

ತುರುವನೂರು ಮಲ್ಲಿಕಾರ್ಜುನ ಅವರು ಸೋರುತಿಹುದು ಮನೆಯ ಮಾಳಿಗೆ ಕಥೆ ಹೇಳಿದರು. ಹವ್ಯಾಸಿ ಗಾಯಕರ ಬಳಗದ ಬಸವರಾಜ್ ಕೆ. ಪಿ. ತಂಡದ ಆರ್ಮಿ ಬಸವರಾಜ್ ನಾಯ್ಕ, ಭಾಗ್ಯ ನಂಜಪ್ಪ, ಪ್ರತಿಮಾಗೌಡ, ಸುರೇಶ್ ಶೇಟ್ ಹಾಡು ಹೇಳಿದರು. ಶಾರದಾ ಶಂಕರ ಭಜನಾಮಂಡಳಿ ಸದಸ್ಯರು ಭಜನೆ ಹಾಡಿದರು. ಕವಿಗಳಾದ ಪ್ರೊ. ಸತ್ಯನಾರಾಯಣ ಹನಿಗವನ, ಎಂ. ನವೀನ ಕುಮಾರ್, ಅನಿತಾಸೂರ್ಯ, ಭಾರತಿಬಾಯಿ, ಎಂ. ಬಾಲರಾಜ್, ವಾಗೀಶ್ ಆರಾಧ್ಯ ಅವರು ಕವನ ವಾಚಿಸಿದರು. ಕುವೆಂಪು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು, ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸುಜಾತಾ ಅವರು ಪ್ರಾರ್ಥನೆ ಹಾಡಿದರು. ಡಿ. ಗಣೇಶ್ ಸ್ವಾಗತಿಸಿದರು. ಕೆ. ಎಸ್. ಮಂಜಪ್ಪ ನಿರೂಪಿಸಿದರು. ಭೈರಾಪುರ ಶಿವಪ್ಪಗೌಡ ವಂದಿಸಿದರು, ಅರ್ಚಕರಾದ ಸಂದೇಶ ಭಟ್ ಉಪಸ್ಥಿತರಿದ್ದರು.