




ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 33
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ,
(ಮೂಲ- ಅರಹತೊಳಲು, ಭದ್ರಾವತಿ)
ಒಂದು ಸಣ್ಣ ಬಣ್ಣದ ಕಾಗದ ನೋಟೆಂಬ ರೂಪ ಪಡೆದು ನಮ್ಮನ್ನು ತನ್ನ ಹಿಡಿತದಲ್ಲಿ ಕಟ್ಟಿಟ್ಟುಕೊಂಡಿದೆ. ಈ ಬಣ್ಣದ ಕಾಗದ ಇಡೀ ನಮ್ಮ ವ್ಯವಸ್ಥೆಯನ್ನು ತಿಂದು ಹಾಕುತ್ತಿದೆ ನಮ್ಮ ನಡುವೆ ನಿಯತ್ತಿನ ದುಡಿಮೆ ದಿನದ ತುತ್ತಿಗೂ ಸಾಕಾಗದಿರುವುದು ಇಂದಿನ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.
ಹಣ ಎಂಬುದು ನಮಗೆ
ಜೀವ ಕೊಡುತ್ತದೆ.

ಜೀವನವನ್ನು ಕಟ್ಟಿಕೊಡುತ್ತದೆ,
ಹಾಗೆಯೇ ಜೀವವನ್ನು ತೆಗೆಯುತ್ತದೆ,
ಜೀವನವನ್ನು ನಿರ್ನಾಮ ಮಾಡುತ್ತದೆ,
ಇದು ನಮಗೆ ಗೌರವ ಕೊಡುತ್ತದೆ,
ಹೆಮ್ಮೆಪಡಿಸುತ್ತದೆ,
ಒಳ್ಳೆಯದನ್ನು ಮಾಡುತ್ತದೆ,
ಕೆಟ್ಟದ್ದನ್ನು ಮಾಡುತ್ತದೆ,
ಈ ಒಂದು ಸಣ್ಣ ಕಾಗದದ ಹಣ ಮನುಷ್ಯನ ಎಲ್ಲಾ ಒಳ ಮನಸುಗಳನ್ನು ಬಿಚ್ಚಿ ಬಹಿರಂಗಪಡಿಸುತ್ತದೆ,
ಎಲ್ಲದಕ್ಕೂ ಕಾಗದ ಕಾರಣಕರ್ತ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?

ಬದುಕಿಗೆ ನಮ್ಮದೇ ಆದ ಖರ್ಚು ವೆಚ್ಚಗಳಿವೆ. ದುಡಿಮೆಯೂ ಇದೆ. ಅವುಗಳನ್ನ ನಿಭಾಯಿಸುವ ಸಣ್ಣ ಕಾಗದದ ತುಣುಕು ಹಣದ ರೂಪದಲ್ಲಿ ನರ್ತಿಸುತ್ತಾ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ನಿಯತ್ತಿನ ನೈಜ ದುಡಿಮೆ ನಿತ್ಯವನ್ನು ತಳ್ಳುವ ಕೆಲಸ ಮಾಡುತ್ತದೆ ಆದರೂ ಸಹ ಮಿತಿಮೀರಿದ ಆಸೆಯಿಂದ ಬಯಕೆಗಳಿಂದ ಸಾಲುತ್ತಿಲ್ಲ. ಹಾಗೆಯೇ ಇತಿಮಿತಿಯೊಳಗೆ ಹೆಜ್ಜೆ ಹಾಕುವ ಮಂತ್ರ ಇಂದಿನ ಆಧುನಿಕತೆಯ ಸಮಾಜದಲ್ಲಿ ಮರೆಯಾಗುತ್ತಿರುವುದು ನಿಜಕ್ಕೂ ಹೆಚ್ಚುತ್ತಿದೆ.


ಏಕೆಂದರೆ ನಿತ್ಯ ಹೊಸ ಹೊಸ ಹೊಸತನ್ನು ಪಡೆಯುವ ಹಂಬಲ ಕೈಗೆಟುಕದಿದ್ದರೂ ಅದನ್ನು ಪಡೆಯುವ ಅಭಿಲಾಷೆ ಹೊಂದಿರುತ್ತೇವೆ. ಹಾಗಾಗಿಯೇ ನಮ್ಮನ್ನು ನಾವು ಮಾರಿಕೊಳ್ಳುತ್ತೇವೆ. ಮೋಸ ಹೋಗುತ್ತಿದ್ದೇವೆ. ಮೋಸ ಮಾಡುತಿದ್ದೇವೆ. ವಂಚಿಸುವ ಜಾಗದ ಸುಳಿಯೊಳಗೆ ಸಿಲುಕಿಕೊಳ್ಳುತ್ತಿದ್ದೇವೆ. ಇಲ್ಲಿ ವಂಚಕರಾಗುತ್ತೇವೆ, ಇಲ್ಲವೇ ಕಳೆದುಕೊಳ್ಳುವವರಾಗುತ್ತೇವೆ ಅಲ್ಲವೇ?
ನಾವು ಕರೆಯುವ ಲಕ್ಷ್ಮಿ ಎನ್ನುವ ಹಣ ಮಾಯಾವಿಯೇ ಹೌದು. ಕೆಲವೆಡೆ ಬಚ್ಚಿಟ್ಟುಕೊಳ್ಳುತ್ತಾಳೆ. ಕೆಲವೆಡೆ ತಪ್ಪಿಸಿಕೊಂಡು ಓಡಿ ಹೋಗುತ್ತಾಳೆ. ಹಣವೆಂಬ ಮಾಯೆ. ಇಡೀ ನಮ್ಮ ನಮ್ಮ ಮನದ ಮನುಷ್ಯತ್ವ ಪ್ರೀತಿ, ವಿಶ್ವಾಸ ನಂಬಿಕೆಗಳ ಅರ್ಥವನ್ನೇ ದೂರ ಮಾಡುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
(ಮುಂದುವರೆಯುತ್ತದೆ)