![IMG_20250125_140139](https://tungataranga.com/wp-content/uploads/2025/01/IMG_20250125_140139.jpg)
![](https://tungataranga.com/wp-content/uploads/2025/02/IMG-20250206-WA0016-1024x521.jpg)
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 32
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಪ್ರೇಮಕ್ಕೆ “ಕಾಮ”ವೇ ಮುಖ್ಯವಾಯ್ತಾ? ಬದುಕು ಬದಲಾಯಿತೇ, ಜಗತ್ತೇ ಬದಲಾಯ್ತಾ? ಹಿಂದಿನ ದಿನಮಾನಗಳು ಬದಲಾಗಿ ಪ್ರೇಮ ಇಂದು ಕ್ಷಣಿಕವಾಯ್ತಾ? ಕಾಮಕ್ಕಾಗಿ ನೆಪಮಾತ್ರದ ಪ್ರೇಮಾನಾ? ಮದ್ವೆ ಗಿದ್ವೆ ಎಲ್ಲಾ ಜಸ್ಟ್ ಒಂದ್ ಹೆಜ್ಜೇನಾ? ಹೀಗೆ ನೂರಾರು ಪ್ರಶ್ನೆಗಳ ಸಹಿತದ ಇಂದಿನ ಯಂಗ್ ಮನಸುಗಳ, ಅವರ ಕ್ಷಣಿಕ ಕನಸುಗಳ ಲವ್ ಎಂಬ ಅವರದೇ ಭಾಷೆಯಲ್ಲಿನ ನಾಟಕದ ವಿಷಯವೇ ಈ ವಾರದ ನೆಗಿಟೀವ್ ಥಿಂಕಿಂಗ್ ಅಂಕಣ ಮುಖ್ಯ ವಿಷಯ.
ಇದು ಎಲ್ಲಾ ಯಂಗ್ ಮನಸ್ಸುಗಳ ಕುರಿತು ಹೇಳಿದ ಮಾತಲ್ಲ. ಆದರೆ ಬಹಳಷ್ಟು ಯಂಗ್ ಎಂದು ಹೇಳಿಕೊಳ್ಳುವ ಮನಸುಗಳ ಮಾತು, ಇಂದು ಮದುವೆ, ನಾಳೆ ಡೈವರ್ಸ್, ನಾಡಿದ್ದು ಹೊಸ ಹೆಂಡತಿ ಹಂಗೇ ಹೊಸ ಗಂಡ, ಇಲ್ಲವೇ ಗಂಡನೂ ಇಲ್ಲ, ಹೆಂಡ್ತಿನೂ ಇಲ್ಲ ನಮ್ದೆ ದುನಿಯಾ ಎನ್ನುವಂತಿರುವ ಕೆಲವೇ ಕೆಲವು ಪ್ರೇಮ ಪಾಠಗಳ ಕಹಾನಿಯ ಒಂದಿಷ್ಟು ಘಟನೆಗಳ ಕಥೆಗಳು ಈಗೀಗ ಸಹಜವಾಗಿದೆ ಅಲ್ಲವೇ?
![](https://tungataranga.com/wp-content/uploads/2025/02/IMG-20250123-WA0033-731x1024.jpg)
ಹಿಂದೆ ಅಷ್ಟಾಗಿ ಕಾಣಿಸಿಕೊಳ್ಳದಿದ್ದ ಹ್ಯಾಪಿ ಹುಟ್ಟಿದಬ್ಬ, ಮದುವೆಯ ವಾರ್ಷಿಕೋತ್ಸವ ದಿನಗಳಂತೆ ಪ್ರೇಮಿಗಳ ದಿನ ಈಗ ದೊಡ್ಡ ದೊಡ್ಡ ಹಬ್ಬವಾವಾಗಿದೆ. ಅಲ್ಲಿ ಸಂತಸ ಸಡಗರ ಸಾಕಷ್ಟು ಕಡೆ ಕಂಡುಬರುತ್ತದೆ, ಆದರೆ ಅತ್ಯಂತ ವಿಶೇಷವಾಗಿ ಪ್ರೇಮಿಗಳ ದಿನ ಎನ್ನುವ ಫೆಬ್ರವರಿ 14 ಅತ್ಯಂತ ಸುಚಿತ್ರವಾಗಿ ನಮ್ಮ ನಡುವೆ ಗುರುತಿಸಿಕೊಳ್ಳುತ್ತಿದೆ. ಧರ್ಮ ಜಾತಿ ಹಾಗೂ ನಮ್ಮೊಳಗಿನ ಎಲ್ಲಾ ಬಗೆಗಳನ್ನು ನೀಡಿದ ಇಂತಹ ಆಚರಣೆಗಳು ಈಗ ಜಸ್ಟ್ ಫಾರ್ ಒನ್ ಮಿನಿಟ್ ಎನ್ನುವ ಲೆಕ್ಕಕ್ಕೆ ಹೋಗಿರುವುದು ನಮಗೆ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನೇ ನೆನಪಿಸದಿರುವುದು ದುರಂತವೇ ಹೌದು. ಅದು ನಮ್ಮ ನಡುವಿನ ನಮ್ಮತನವನ್ನು ಸಂಪೂರ್ಣವಾಗಿ ದೂರ ಮಾಡುತ್ತಿದೆ.
ದೈಹಿಕ ಆಕಾಂಕ್ಷೆ ಅಭಿಲಾಷೆ ನಮ್ಮ ನಡುವೆ ನೆಪ ಮಾತ್ರದ ಮಾನಸಿಕ ತಲ್ಲಣಗಳಿಗೆ ಕಾರಣವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸುಮಾರು 30 ವರ್ಷಗಳಿಗಿಂತ ಮುಂಚಿನ ಬಾಂಧವ್ಯ ಪ್ರೀತಿ, ವಿಶ್ವಾಸ, ಆತ್ಮೀಯತೆ, ಪ್ರೇಮವೆಂಬ ಸ್ವರ್ಗ ಈಗ ನೆಪಮಾತ್ರದ ಭೂಟಾಟಿಕೆಯಲ್ಲಿ ಬಹಳಷ್ಟು ಕಡೆ ತಲ್ಲಣಿಸುತ್ತಿರುವುದು, ನಟಿಸುತ್ತಿರುವುದು ನಮಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದು ಅತ್ಯಂತ ವ್ಯಂಗ್ಯ ಹಾಗೂ ನಮ್ಮ ನಡುವಿನ ದುರಂತ ಎಂದರೆ ತಪ್ಪಾಗಲಿಕ್ಕಿಲ್ಲ.
![](https://tungataranga.com/wp-content/uploads/2025/02/Screenshot_2025_0125_190116-1-429x1024.jpg)
![](https://tungataranga.com/wp-content/uploads/2025/02/Screenshot_2025_0125_172302-667x1024.jpg)
![](https://tungataranga.com/wp-content/uploads/2025/02/IMG_20250125_140735-1-424x1024.jpg)
![](https://tungataranga.com/wp-content/uploads/2025/02/IMG_20250125_140612-1.jpg)
![](https://tungataranga.com/wp-content/uploads/2025/02/IMG_20250125_140540-1-502x1024.jpg)
ಹಿಂದಿನ ಸಿನಿಮಾ ಗೀತೆಗಳ ಪ್ರೇಮ, ಅಂದಿನ ವಾಸ್ತವದ ಬದುಕು ಬದಲಾಗಲು ಕಾರಣ ಆಧುನೀಕರಣ ಎನ್ನಬಹುದು. ವಿಶಾಲದ ಮನಸ್ಸು ಈಗೀಗ ಅತ್ಯಂತ ಸಣ್ಣದಾಗುತ್ತಿದೆ. ವ್ಯಕ್ತಿತ್ವಕ್ಕೆ ಬೆಲೆಯೇ ಇಲ್ಲ ಎನ್ನಬಹುದು ಅಲ್ಲವೇ? ಈಗೀಗ ಲವ್ ಅಂದರೆ ಬಹಳಷ್ಟು ಭಾಗ ದೈಹಿಕ ಆಕರ್ಷಣೆ ಜೊತೆ ಅವನ ಅಥವಾ ಅವಳ ಆರ್ಥಿಕತೆಯ ಲೆಕ್ಕಾಚಾರವಾಗಿದೆ ಎನ್ನಬಹುದು.
1973 ರ ಸಾಲಿನ ದೂರದ ಬೆಟ್ಟ ಸಿನಿಮಾದ ಹಾಡೊಂದು ಇಲ್ಲಿ ನೆನಪಾಗುತ್ತಿದೆ.
ಪ್ರೀತಿನೆ ಆ ದ್ಯಾವ್ರು ತಂದಾ
ಆಸ್ತಿ ನಮ್ಮ ಬಾಳ್ವೆಗೆ,
ಪ್ರೀತಿನೆ ಆ ದ್ಯಾವ್ರು ತಂದಾ
ಆಸ್ತಿ ನಮ್ಮ ಬಾಳ್ವೆಗೆ…,
ಹಸಿವಿನಲ್ಲೂ ಹಬ್ಬಾನೇ
ದಿನವು ನಿತ್ಯ ಉಗಾದಿನೇ..
ನನ್ನ ನಿನ್ನ ಪಾಲಿಗೇ…
ಎಷ್ಟು ಚಂದ ಇದೆ ಹಾಡು ಅದು, ಅವಾಗಿನ ಬಹಳಷ್ಟು ಮನಸುಗಳು ಅದಕ್ಕೆ ಪೂರವಾಗಿದ್ದವು.
ಆದರೆ, ಇಂದಿನ ಹಾಡುಗಳು ಸಾಹಿತ್ಯವನ್ನೇ ಮರೆತಿವೆ. ಸಿಂಪಲ್ ಆಗಿ ಮೀಟ್, ಡೇಟಿಗೆ ಅಡಿ ಇಡುತ್ತಿವೆ. ಏಕಲವ್ಯ ಸಿನಿಮಾದ ಹಾಡಿನ ಸಾಲು ನೋಡ್ರಿ
ಮೀಟ್ ಮಾಡಣ,
ಮೀಟ್ ಮಾಡಣ,
ಮೀಟ್ ಮಾಡಣ ಇಲ್ಲಾ ಡೇಟ್..
ಮೀಟ್ ಮಾಡಣ ಇಲ್ಲಾ ಡೇಟ್..
ಅಪ್ಪಾ ಯಾಕೊ ವಯಸ್ಸಾಯ್ತು
ಮದ್ವೆ ಆಗು ಅಂತಾರೆ..
ಮೀಟ್ ಮಾಡಣ
ಅಜ್ಜಿ ಯಾಕೊ ಸಾಯಕ್ ಮುಂಚೆ
ಮೊಮ್ಮಗುನ ಕೇಳ್ತಾರೆ..,
ಮೀಟ್ ಮಾಡಣ
ನೆಂಟ್ರೆಲ್ಲ ಮದ್ವೆ ಊಟ
ಯಾವಾಗ ಅಂತಾರೆ
ಫ್ರೆಂಡ್ಸೆಲ್ಲಾ ಎಣ್ಣೆ ಪಾರ್ಟಿ
ಕೊಡ್ಸಲ್ವ ಅಂತಾರೆ
ಏನ್ಮಾಡಣ..
ಹೇಳು ಏನ್ಮಾ..ಡಣ..
ಮೀಟ್ ಮಾಡಣ ಇಲ್ಲಾ
ಡೇಟ್ ಮಾಡಣ..
ಇದು ಇಂದಿನ ಜಗದ ಹಾಡು., ಅಂದು ಹೆಂಗೇಗೋ ಇದ್ದವರೂ ಸಹ ಇಂದು ಇಂತಹ ಹಾಡಿಗೆ ಬಲಿಯಾಗುತ್ತಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ.
ಮದುವೆಯಾಗಿ 50 ವರ್ಷ ಆಯ್ತು 60 ವರ್ಷ ಆಯ್ತು ಅಂತ ಅವರ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಹಬ್ಬ ಮಾಡುವುದನ್ನು ಸಾಕಷ್ಟು ಕಡೆ ಕಂಡಿದ್ದೇವೆ, ನೋಡಿದ್ದೇವೆ. ಅದರ ಖುಷಿಯನ್ನು ಸವಿದಿದ್ದೇವೆ.
ಆದರೆ ಇಂದಿನ ಮದುವೆಗಳಲ್ಲಿ ಕೆಲವೇ ಕೆಲವು ಮನಸ್ಸುಗಳ ವಿಕೃತಿಯಿಂದ ನ್ಯಾಯಾಲಯದ ಡೈವರ್ಸ್ ಪದ ಅತ್ಯಂತ ಸುಲಭವಾಗಿ ಬಳಕೆಯಾಗುತ್ತಿದೆ. ಪರಸ್ಪರ ಹೊಂದಾಣಿಕೆ, ಒಂದಿಷ್ಟು ಇತಿಮಿತಿ ನಮ್ಮ ನಡುವೆ ಮರೆಯಾಗುತ್ತಿರುವುದು ಇದಕ್ಕೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.
![](https://tungataranga.com/wp-content/uploads/2025/01/Screenshot_2024_1227_135527.jpg)
ಒಟ್ಟಾರೆ ಪ್ರೇಮ ಎಂಬುದು ಹಿಂದೆ ಎಲ್ಲೋ ಪಾರ್ಕ್ ನಲ್ಲಿ ದೂರ ದೂರ ಕುಳಿತು ಮಾತನಾಡುವ ಪರಸ್ಪರ ಕುಶಲೋಪರಿ ಜೊತೆಗೆ ಹೊಂದಾಣಿಕೆಯ ಇಂಗಿತ ವ್ಯಕ್ತಪಡಿಸುವ ವೇದಿಕೆಯಾಗಿತ್ತು. ಈಗ ಮೊದಲು ಮೀಟ್ ಆಮೇಲೆ ಮಿಕ್ಕಿದ್ದೆಲ್ಲ ನಾನಾ ಅವಾಂತರಗಳ ನಡುವೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ನಮ್ಮ ನಮ್ಮ ಭಾವನೆಗಳನ್ನ, ಪ್ರೀತಿಗಳನ್ನ, ವ್ಯಕ್ತಿತ್ವವನ್ನು ಕಳ್ಳತನ ಮಾಡುತ್ತಿರುವ ವ್ಯವಸ್ಥೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಎಲ್ಲರಿಗೂ ಫೆಬ್ರವರಿ 14ರ ಪ್ರೇಮಿಗಳ ದಿನದ ಶುಭಾಶಯಗಳು. ದೈಹಿಕ ಆಕರ್ಷಣೆ ಪ್ರೇಮವಾಗಬಾರದು ಪರಸ್ಪರ ಮಾನಸಿಕ ಭಾವನಾತ್ಮಕ ಹೊಂದಾಣಿಕೆಯ ಜೀವನ ರೂಪಿಸಿಕೊಳ್ಳುವ ವೇದಿಕೆಯಾಗಲಿ ಎಂಬುದು ನಮ್ಮ ಶುಭ ಹಾರೈಕೆ.
(ಮುಂದುವರೆಯುತ್ತದೆ)
ಉದ್ದಾರವಾಗ್ರಿ ಹಂಗೇ ಉದಾರಿಯೂ ಆಗಿರ್ರಿ…,
ಈ ಜಗದಲ್ಲಿ ನಾವು ಇದನ್ನು ಮರೆಯೋದ್ ಬ್ಯಾಡ್ರೀ
ಇಲ್ಲಿ ಕೊಟ್ಟು ಹೋಗಬೇಕು,
ಇಲ್ಲ ಬಿಟ್ಟು ಹೋಗಬೇಕು,
ನೀವಂತೂ ಏನೂ ತಗೊಂಡು ಹೋಗೋಕೆ ಆಗೋಲ್ಲ,
ನಿಮ್ಮ ಹಣೆ ಮೇಲೆ ಇಟ್ಟ ಒಂದು ರೂಪಾಯಿ ಕಾಯಿನ್ ಸಹ ತಗೊಂಡು ಹೋಗೋಕೆ ಆಗಲ್ಲ..,
ದುಡೀರಿ, ದುಡ್ಡು, ಆಸ್ತಿ ಮಾಡ್ರೀ.. ಆದರೆ ಹೊಟ್ಟೆ ನೀವಾದರೂ ಉಣ್ರಿ,
ಕಷ್ಟದಲ್ಲಿರುವವರಿಗೆ ನಾಕಾಣೆ ಸಹಾಯ ಮಾಡಿ ಅದನ್ನು ಬಿಟ್ಟು ಎಲ್ಲಾ ಕೂಡಿಟ್ಟು ದುಂಡಗೆ ಗಂಟು ಕಟ್ಟಿಟ್ಟು ತುತ್ತು ತಿನ್ನದೇ ಉದಾರ ಮನಸ್ಸು ಮರೆತು ಕೂಡಿಟ್ಟ ಹಣ ನಿಮ್ಮ ಹೆಣವನ್ನು ಸುಡಲು ಬರುತ್ತದೆ ಅಷ್ಟೇ, ಅದನ್ನು ಬಿಟ್ಟು ನೀವಂತೂ ಅದನ್ನು ತಗೊಂಡ್ ಹೋಗಲ್ಲ ಅಲ್ವೇನ್ರಿ?