![Untitled-5 copy](https://tungataranga.com/wp-content/uploads/2025/02/Untitled-5-copy-1-1024x461.jpg)
ಶಿವಮೊಗ್ಗ,ಫೆ.08: 25-26ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಬಡ ಹಾಗೂ ಮಧ್ಯಮ ವರ್ಗಕ್ಕೆ ಒತ್ತುನೀಡಲಾಗಿದ್ದು, 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದರಿಂದ ಜನಸಾಮಾನ್ಯರಿಗೆ ಲಾಭವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಚೀನಾಕ್ಕಿಂತ ಹೆಚ್ಚಿನ ಸಂಖ್ಯೆ ಇರುವ ಭಾರತ ವಿಶ್ವದಲ್ಲೇ ಜಿಡಿಪಿಯಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿದೆ. ಕೋವಿಡ್ ಸಂದರ್ಭದಲ್ಲೂ ಈ ದೇಶವನ್ನು ಪ್ರಧಾನಿ ಮೋದಿಯವರು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದಾಯ ತೆರಿಗೆ ವಿನಾಯಿತಿಯಿಂದ ಮಧ್ಯಮ ವರ್ಗದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ. ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಯನ್ನು ಗುರಿಯಾಗಿಸಿ ಈ ಬಜೆಟ್ ಮಂಡನೆ ಮಾಡಿದ್ದು, ರೈತರಲ್ಲಿ, ಕೈಗಾರಿಕೋಧ್ಯಮಗಳಲ್ಲಿ ವಿಶ್ವಾಸ ಹೆಚ್ಚಿಸಿದೆ. ಎಸ್ಸಿ,ಎಸ್ಟಿ ಉದ್ಯಮಿಗಳಿಗೆ 2 ಕೋಟಿ ವರೆಗೆ ಸಾಲ, ಮಹಿಳೆಯರಿಗೆ 5 ಲಕ್ಷ ರೂ. ಸಾಲ ಆರೋಗ್ಯ ಕ್ಷೇತ್ರಕ್ಕೆ ಒತ್ತು, ಮೆಡಿಕಲ್ ಸೀಟ್ಗಳ ಹೆಚ್ಚಳ ಮಾಡಿ ದೇಶದ ಸಂಪೂರ್ಣ ಆರ್ಥಿಕತೆಯ ಚಿತ್ರಣವನ್ನು ಈ ಬಜೆಟ್ ಬದಲಾಯಿಸಿದೆ ಎಂದರು.
![](https://tungataranga.com/wp-content/uploads/2025/02/JNNCE-VTU-25-819x1024.jpg)
27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಗದ್ದುಗೆ ಏರಿದೆ. ಕೇಜ್ರಿವಾಲಾರವರ ಭ್ರಷ್ಟಚಾರಕ್ಕೆ ಮತದಾರ ಪಾಠ ಕಲಿಸಿದ್ದಾರೆ. ಕಾಲಿಸ್ತಾನ್ ಪರವಾಗಿ ಕೇಜ್ರಿವಾಲ ಅವರ ಧೋರಣೆಗೆ ದೆಹಲಿಯ ಜನ ಮತದಾನದ ಮೂಲಕ ಉತ್ತರ ನೀಡಿ ದೇಶಪ್ರೇಮ ಮೆರೆದಿದ್ದಾರೆ, ರಾಜ್ಯಾಧ್ಯಕ್ಷರ ಗೊಂದಲಕ್ಕೆ ಆದಷ್ಟು ಬೇಗ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಶಿಕಾರಿಪುರ ರೈತರ ಪರವಾಗಿ ತೀ.ನಾ.ಶ್ರೀನಿವಾಸ್ ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ನಾನು ಯಾವುದೇ ಆಣೆ, ಪ್ರಮಾಣ ಮಾಡಿಲ್ಲ. ರೈತರಿಗೆ ತಪ್ಪು ಮಾಹಿತಿ ತಲುಪಿದ್ದು, ಅವರೊಂದಿಗೆ ನಾನು ಮಾತನಾಡುತ್ತೇನೆ. ಹಗುರವಾಗಿ ಮಾತನಾಡುವುದನ್ನು ತೀ.ನಾ.ಶ್ರೀ ಅವರು ಬಿಡಬೇಕು. ಶಿಕಾರಿಪುರ ರೈತರ ಬಗ್ಗೆ ಅವರಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದರು.
![](https://tungataranga.com/wp-content/uploads/2025/02/IMG_20250125_140612-1.jpg)
1972ರಿಂದ ಶೆಟ್ಟಿಹಳ್ಳಿ ಅಭಯಾರಣ್ಯದ 695 ಚ.ಕಿ.ಮೀ ಡಿ.ನೋಟಿಫಿಕೇಷನ್ಗೆ ಪ್ರಯತ್ನವಾಗಿತ್ತು. ಈಗ ಅದಕ್ಕೆ ಫಲ ಸಿಕ್ಕಿದೆ. ಶಿವಮೊಗ್ಗದಿಂದ ಆಯನೂರು/ಕೋಣಂದೂರು, ಮಂಡಗದ್ದೆ, ಶಿವಮೊಗ್ಗ ವ್ಯಾಪ್ತಿಯ ಸುರಕ್ಷಿತಾರಣ್ಯ ಈಗ ಡಿನೋಟಿಫೀಕೇಷನ್ ಆಗಿರುವುದರಿಂದ 675ರಿಂದ 395 ಚ.ಕಿ.ಮೀ.ಗೆ ಕಡಿಮೆಯಾಗಲಿದ್ದು, ಇದರಿಂದ ಆ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
ಶಿಕಾರಿಪುರದಲ್ಲಿ ವಿದ್ಯುತ್ ಗ್ರೀಡ್ಗೆ ಗೋಪುರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ 10 ಸಾವಿರ ಅಡಿಕೆ ಮರಗಳು ನಾಶವಾಗುತ್ತಿಲ್ಲ. ಇದು ಸುಳ್ಳು, ಪರ್ಯಾಯ ಮಾರ್ಗದಲ್ಲಿ ತೆಗೆದುಕೊಂಡು ಹೋದರೆ ಇನ್ನಷ್ಟು ಅನಾಹುತಗಳು ಆಗುತ್ತವೆ. ಮತ್ತು ಅವೈವಜ್ಞಾನಿಕವಾಗಿದೆ. ಇದೇ ಮೊದಲ ಬಾರಿಗೆ ಗ್ರೀಡ್ನ ಕೆಳಭಾಗದಲ್ಲಿ ಇರುವ ಬೆಳೆಗೆ ರೈತರಿಗೆ ಪರಿಹಾರ ದೊರಕಲಿದೆ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಗ್ ಟ್ರಯಲ್ ಯಶಸ್ವಿಯಾಗಿದ್ದು, ಪೇಪರ್ ವರ್ಕ್ ನಡೆಯುತ್ತ ಇದೆ. ಶೀಘ್ರದಲ್ಲೇ ನೈಟ್ ಲ್ಯಾಂಡಿಗ್ ಪ್ರಾರಂಭವಾಗಲಿದೆ ಎಂದರು.
![](https://tungataranga.com/wp-content/uploads/2023/04/Screenshot_2023_0226_070755-1.jpg)
ಇದೇ ಸಂದರ್ಭದಲ್ಲಿ ನಿನ್ನೆ ವೈಮಾನಿಕ ದುರಂತಕ್ಕೊಳಗಾಗಿ ಸಾವನ್ನಪ್ಪಿದ ಹೊಸನಗರ ತಾಲ್ಲೂಕಿನ ವೀರಯೋಧ ಮಂಜುನಾಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು ಯೋಧನ ಮೃತದೇಹ ಶಿವಮೊಗ್ಗಕ್ಕೆ ತರಲು ಸಂಬಂಧಪಟ್ಟವರ ಜೊತೆಗೆ ಈಗಾಗಲೇ ಚರ್ಚಿಸಿದ್ದು, ಇಂದು ರಾತ್ರಿಯೊಳಗೆ ಮೃತದೇಹ ಬರುವ ನಿರೀಕ್ಷೆ ಇದೆ. ಮೃತಯೋಧನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಮತ್ತು ವೀರಯೋಧನ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಗದೀಶ್, ಶಾಸಕ ಚನ್ನಬಸಪ್ಪ, ಪ್ರಮುಖರಾದ ನಾಗರಾಜ್, ಮೋಹನ್ರೆಡ್ಡಿ, ಜ್ಞಾನೇಶ್ವರ್, ಸಂತೋಷ್ ಬಳ್ಳಕೆರೆ, ಶಿವರಾಜ್, ವೀರಭದ್ರಾ ಪೂಜಾರ್, ಮಾಲತೇಶ್, ಚಂದ್ರಶೇಖರ್, ಅಣ್ಣಪ್ಪ ಮೊದಲಾದವರು ಇದ್ದರು.