![Untitled-3 copy](https://tungataranga.com/wp-content/uploads/2025/02/Untitled-3-copy-scaled.jpg)
ಶಿವಮೊಗ್ಗ: ಬಹುತೇಕ ಪಟ್ಟಣದ ಮನೆಗಳ ಎದುರು ಸಂಪ್ ನೀರು ತುಂಬಿ ಪೋಲಾಗುತ್ತಿರುವ ದೃಶ್ಯ ಸರ್ವೆ ಸಮಾನ್ಯವಾಗಿದೆ. ಸಂಪ್ ನೀರು ಉಕ್ಕದಂತೆ ತಡೆದು, ತುಂಬಿದ ತಕ್ಷಣ ನೀರಿನ ಹರಿವು ನಿಲ್ಲುವಂತಾದರೆ. ಅಂತಹ ಸ್ಮಾರ್ಟ್ ಯೋಜನೆಯೊಂದನ್ನು ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ್ದಾರೆ.
![](https://tungataranga.com/wp-content/uploads/2025/02/JNNCE-VTU-25-819x1024.jpg)
ಶನಿವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳು ರೂಪಿಸಿದ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ನಾವೀನ್ಯ ಯೋಚನೆಗಳನ್ನು ಅನಾವರಣಗೊಳಿಸಿದರು.
![](https://tungataranga.com/wp-content/uploads/2023/04/Screenshot_2023_0226_070755-1.jpg)
ಅಟೊಮೆಟೆಡ್ ವಾಟರ್ ಮ್ಯಾನೇಜ್ಮೆಂಟ್ ಶೀರ್ಷಿಕೆಯ ಯೋಜನೆಯೊಂದನ್ನು ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ವಿದ್ಯಾರ್ಥಿಗಳಾದ ಚಿರಾಗ್.ಆರ್, ಪಾರ್ಥ ಸಾರಥಿ, ಕೀರ್ತಿ, ಲಾವಣ್ಯ ರೂಪಿಸಿದ್ದು, ಸಹ ಪ್ರಾಧ್ಯಾಪಕಿ ಡಾ.ಶೀಲಾ.ಎಸ್ ಮಾರ್ಗದರ್ಶನ ನೀಡಿದ್ದಾರೆ. ಅಲ್ಟ್ರಾಸೊನಿಕ್ ಸೆನ್ಸಾರ್, ಆರ್ಡಿನೊ, ಸರ್ವೊ ಮೊಟಾರ್ ಬಳಸಿ ಸಂಪ್ ಗೆ ಬೀಳುವ ನೀರಿನ ಹರಿವನ್ನು ನಿಯಂತ್ರಣ ಮಾಡಬಹುದಾಗಿದ್ದು, ಎಲ್.ಸಿ.ಡಿ ಮೂಲಕ ಬಳಕೆದಾರರು ಪ್ರಸಕ್ತ ಸ್ಥಿತಿಯನ್ನು ತಿಳಿಯಬಹುದಾಗಿದೆ. ಜೊತೆಯಲ್ಲಿ ಪಿಟಿಟಿ ಸೆನ್ಸಾರ್ ಮೂಲಕ ನೀರಿನ ಗುಣಮಟ್ಟವನ್ನು ಲಕ್ಷಿಸಬಹುದಾಗಿದೆ.
ಇದರೊಂದಿಗೆ ವಿವಿಧ ವಿದ್ಯಾರ್ಥಿಗಳು ರೂಪಿಸಿದ ಡೀಪ್ ಲರ್ನಿಂಗ್ ಮತ್ತು ನ್ಯೂರಲ್ ನೆಟ್ವರ್ಕ್ ಮೂಲಕ ರಸ್ತೆಯಲ್ಲಿ ಸುರಕ್ಷಿತವಾಗಿ ಸ್ವಯಂ ವಾಹನೆ ಚಾಲನೆ ಮಾಡಬಲ್ಲ ಸೆಲ್ಫ್ ಡ್ರೈವಿಂಗ್ ಬೊಟ್ ಸಿಸ್ಟಂ, ಮಿಲಿಟರಿ ಯುದ್ಧಭೂಮಿ ಹಾಗೂ ಗಡಿಗಳಲ್ಲಿ ಶತ್ರು ರಾಷ್ಟ್ರದಿಂದ ಬರುವ ಮಿಸೈಲ್, ಡ್ರೋನ್ ಗಳ ಮೇಲೆ ನಿಗಾ ವಹಿಸುವ ಹಾಗೂ ಓಪನ್ ಸಿವಿ ಮೂಲಕ ಲೆಸರ್ ಗನ್ ಬಳಸಿ ಹೊಡೆದುರುಳಿಸುವ ಯೋಜನೆಯನ್ನು ವಿದ್ಯಾರ್ಥಿಗಳು ರೂಪಿಸಿದ್ದಾರೆ. ಮನೆಯಲ್ಲಿಯೇ ಕೊಕೊಪಿತ್, ಕೃತಕ ಬೆಳಕನ್ನು ಬಳಸಿ ಗಿಡಗಳನ್ನು ಬೆಳೆಸಿ ಪೋಷಿಸುವ ಐಓಟಿ ಆಧಾರಿತ ಹೈಡ್ರೊಫೊನಿಕ್ಸ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಗಳು ನೋಡುಗರನ್ನು ಸೆಳೆಯಿತು.
![](https://tungataranga.com/wp-content/uploads/2025/02/IMG_20250125_140612.jpg)
ಕಾರ್ಯಕ್ರಮ ಉದ್ದೇಶಿಸಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಾವು ರೂಪಿಸುವ ಯೋಜನೆಗಳು ಸಮಾಜಮುಖಿಯಾಗಿ ಉಪಯೋಗವಾದಾಗ ಮಾತ್ರ ನಿಜವಾದ ಸಾರ್ಥಕತೆ ಸಾಧ್ಯ. ವಿದ್ಯಾರ್ಥಿಗಳಲ್ಲಿ ಅಧ್ಯಯನದ ಜೊತೆಗೆ ಆವಿಷ್ಕಾರಿ ಮನೋಭಾವವು ಮುನ್ನಡೆ ಸಾಧಿಸಲಿ ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಸಹಾಯಕ ಪ್ರಾಧ್ಯಾಪಕಿ ಉಜ್ವಲ ರವಿಕುಮಾರ್, ಡಾ.ಶೀಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.