ಹುಡುಕಾಟದ ವರದಿ-1
ಶಿವಮೊಗ್ಗ,ಫೆ.08:
ಶಿವಮೊಗ್ಗ ಮಹಾನಗರ ಪಾಲಿಕೆಯ ಈ ಸ್ವತ್ತು ಹಾಗೂ ಕಂದಾಯ ವಿಭಾಗದ ಹತ್ತು ಹಲವು ಆರೋಪಗಳ ನಡುವೆ ಡಾಟಾ ಎಂಟ್ರಿ ಆಗಿ ಮ್ಯಾನ್ ಪವರ್ ಏಜೆನ್ಸಿ ಮೂಲಕ ಬಂದ ಒಬ್ಬರು ಅಧಿಕಾರಿ ಒಬ್ಬರ ಕೃಪಾಕಟಾಕ್ಷದಿಂದ ತಾವೇ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇಲ್ಲಿ ಕೇವಲ ಮ್ಯಾನ್ ಪವರ್ ಏಜೆನ್ಸಿಯ ಡಾಟಾ ಎಂಟ್ರಿ ಹಾಗೂ ಇತರ ಕೆಲಸದವರ ಮೇಲಷ್ಟೇ ಅಲ್ಲ ಪಾಲಿಕೆಯ ನೌಕರರ ಮೇಲೂ ದರ್ಪ ತೋರಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಶಿವಮೊಗ್ಗ ಮಹಾನಗರ ಪಾಲಿಕೆ ಅಂಗಳದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ.


ಅತ್ಯಂತ ವಿಚಿತ್ರವೆಂದರೆ ಈ ಡಾಟಾ ಎಂಟ್ರಿ ಆಪರೇಟರ್ ಮನೆಗೆ ಊಟಕ್ಕೆ ಹೋಗಿ ಬರಲು ಹಾಗೂ ಇತರ ಕೆಲಸಗಳಿಗೆ ಪಾಲಿಕೆಯ ವಾಹನವನ್ನು ಕಳುಹಿಸುತ್ತಿದ್ದು ಇತರ ನೌಕರರು ಮತ್ತು ಅಧಿಕಾರಿಗಳು ಅವರ ಈ ವರ್ತನೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಹಿರಿಯ ಅಧಿಕಾರಿ ಪಾಲಿಕೆ ಆಯುಕ್ತರ ಎದುರು ಈ ಅಳನನ್ನು ಹೇಳುವುದು ಹೇಗೆ ಎಂಬ ನೋವಿನಲ್ಲಿ ಬಳಲುತ್ತಿದ್ದಾರೆ ಎಂಬ ವಾಸ್ತವದ ಚಿತ್ರಣ ಕಣ್ಣಾರೆ ಕಂಡು ಬಂತು.

ಕೇವಲ ಡಾಟಾ ಆಪರೇಟರ್ ಬಂದ ಈ ಮಹಿಳಾ ಮೇಡಂ(?) ಈಗ ಪಾಲಿಕೆಯಲ್ಲಿ ಬಹುದೊಡ್ಡ ಹೆಸರನ್ನು ಹೊಂದಿದ್ದಾರೆ. ಬಹಳಷ್ಟು ನೌಕರರನ್ನು ಏಕವಚನದಲ್ಲಿ ತಾನೇ ಸರ್ವಾಧಿಕಾರಿ ಎಂಬಂತೆ ವರ್ತಿಸುತ್ತಿದ್ದಾರೆ.
ಇದು ಪಾಲಿಕೆಯಲ್ಲಿ ಇಷ್ಟು ದಿನ ಕೆಲಸ ಮಾಡಿದ ನೌಕರರಿಗೆ ಅತೀವ ಗಾಸಿ ಉಂಟುಮಾಡಿದೆ ಎಂದು ಇದೇ ಅಂಗಳದಲ್ಲಿ ಕೇಳಿ ಬಂದಿದೆ. ಕೂಡಲೇ ಈ ಆಪರೇಟರ್ ಗೆ ಕಡಿವಾಣ ಹಾಕಬೇಕು ಆ ಮ್ಯಾನ್ ಪವರ್ ಏಜೆನ್ಸಿ ಮೂಲಕ ಇಲ್ಲಿಗೆ ಬಂದಿರುವ ಮಹಿಳೆಯನ್ನು ಬೇರೆಡೆ ಕಳುಹಿಸಬೇಕು. ಇಲ್ಲದಿದ್ದರೆ ಪಾಲಿಕೆಗೆ ಹಾಗೂ ಇಡೀ ವ್ಯವಸ್ಥೆಗೆ ಅಗೌರವ ಖಚಿತ ಎನ್ನುವ ಅಲ್ಲಿನ ಮಾತು ಆಯುಕ್ತರ ಗಮನಕ್ಕೆ ಬರಲಿ ಎಂಬ ಉದ್ದೇಶ ನಮ್ಮದು.
ಇಲ್ಲಿ ಪತ್ರಿಕೆ ಅವರ ಹೆಸರನ್ನು ಉಲ್ಲೇಖಿಸದಿರಲು ಕಾರಣವಿಷ್ಟೆ
ಆ ಡಾಟಾ ಆಪರೇಟರ್ ಯಾರು ಎಂಬುದನ್ನು ಆಯುಕ್ತರು ತಿಳಿದುಕೊಳ್ಳಲು ಕಷ್ಟವೇನಲ್ಲ. ಇಡೀ ಪಾಲಿಕೆಯ ಕೆಲವು ಗುಸು ಗುಸು ಹಾಗೂ ಪಿಸು ಪಿಸು ಮಾತುಗಳು ಮತ್ತು ಘಟನೆಗಳು ಮಾಧ್ಯಮದ ಒಂದಿಷ್ಟು ಭಾಗಗಳಿಗೆ ಹರಿದಾಡಲು ಈ ಸರ್ವಾಧಿಕಾರಿಯೇ ಕಾರಣ ಎಂಬ ಮಾತು ಕೇಳಿ ಬಂದಿದೆ. ಇತ್ತ ಗಮನಿಸುವುದು ಒಳಿತು ಎಂಬುದು ನಮ್ಮ ಅಭಿಪ್ರಾಯ.