ಬೆಂಗಳೂರು: ಈ ವರ್ಷದ ಎಪ್ರಿಲ್- ಮೇಯಲ್ಲಿ ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತ್ಗಳಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆಯಾದರೂ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿ ಕೊಡಲು ಸರಕಾರ ಮೀನಮೇಷ ಎಣಿಸುತ್ತಿರುವುದರಿಂದ ಕಾದು ಸುಸ್ತಾಗಿರುವ ರಾಜ್ಯ ಚುನಾವಣ ಆಯೋಗ ಕೊನೆಗೆ ರಾಜ್ಯದ 5 ಮಹಾನಗರ ಪಾಲಿಕೆಗಳಿಗೆ ಮಾರ್ಚ್-ಎಪ್ರಿಲ್ನಲ್ಲಿ ಚುನಾವಣೆ ನಡೆಸಲು ಮುಂದಾಗಿದೆ.
ಮಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.
ಈ ಪೈಕಿ ಶಿವಮೊಗ್ಗ, ಮೈಸೂರು ಮಹಾನಗರ ಪಾಲಿಕೆಗಳಿಗೆ 2018ರ ಆಗಸ್ಟ್ನಲ್ಲಿ ಚುನಾವಣೆ ನಡೆದಿದ್ದು, ಅವುಗಳ ಅವಧಿ 2023ರ ನವೆಂಬರ್ನಲ್ಲಿ ಮುಗಿದಿತ್ತು. ತುಮಕೂರು ಮನಪಾ ಅವಧಿ 2024ರ ಜನವರಿಯಲ್ಲಿ ಮುಗಿದಿತ್ತು. ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರವು ಆಯೋಗಕ್ಕೆ ಕಳುಹಿಸಬೇಕು. ಆದರೆ ಸರಕಾರದಿಂದ ಈವರೆಗೆ ಮೀಸಲಾತಿ ಪಟ್ಟಿ ಬಂದಿಲ್ಲ. ಉಳಿದಂತೆ ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆಗಳ ಅವಧಿ ಈ ತಿಂಗಳು ಮುಗಿಯಲಿದೆ. ಇವೆರಡರ ಮೀಸಲಾತಿ ಪಟ್ಟಿ ಬಗ್ಗೆಯೂ ಈವರೆಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಎಲ್ಲ 5 ಮಹಾನಗರ ಪಾಲಿಕೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ.
ಈಗಿರುವ ಮೀಸಲಾತಿಯಂತೆ ಚುನಾವಣೆ?
ಅವಧಿ ಮುಗಿದ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಮೀಸಲಾತಿ-ಕ್ಷೇತ್ರ ಮರುವಿಂಗಡಣೆ ನಿಗದಿ ಸಕಾಲದಲ್ಲಿ ಆಗದಿರುವುದೇ ಬಹುದೊಡ್ಡ ಅಡ್ಡಿ. ಸರಕಾರದಿಂದ ಸಾಮಾನ್ಯವಾಗಿ ಈ ಪ್ರಕ್ರಿಯೆ ವಿಳಂಬವಾಗುತ್ತದೆ. ಅನಂತರ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿದರೆ ಅದು ಯಾವಾಗ ಮುಗಿಯುತ್ತದೆ ಎಂದು ಹೇಳಲಾಗದು. ಹಾಗಾಗಿ ಈ 5 ಮಹಾನಗರ ಪಾಲಿಕೆಗಳಿಗೆ ಈಗಿರುವ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆ ಆಧಾರದಲ್ಲಿಯೇ ಚುನಾವಣೆಗೆ ಹೋಗುವುದಕ್ಕೆ ಆಯೋಗ ನಿರ್ಧರಿಸಿದೆ. ಏಕೆಂದರೆ ಮೀಸಲಾತಿ-ಕ್ಷೇತ್ರ ಮರು ವಿಂಗಡಣೆ ವಿಳಂಬವಾದರೆ ಹಾಲಿ ಇರುವ ಮೀಸಲಾತಿ-ಕ್ಷೇತ್ರ ಮರು ವಿಂಗಡಣೆಯಂತೆ ಚುನಾವಣೆ ನಡೆಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಸದ್ಯ ಮಂಗಳೂರು ಮನಪಾದಲ್ಲಿ 60, ದಾವಣಗೆರೆ ಮನಪಾದಲ್ಲಿ 45, ಶಿವಮೊಗ್ಗ 35, ಮೈಸೂರು 65, ತುಮಕೂರು ಮಹಾನಗರ ಪಾಲಿಕೆಯಲ್ಲಿ 35 ವಾರ್ಡ್ಗಳಿದ್ದು, ಈ ಮಹಾನಗರ ಪಾಲಿಕೆಗಳಿಗೆ ಹಿಂದಿನ ಚುನಾವಣೆಯಲ್ಲಿದ್ದ ಮೀಸಲಾತಿ ಆಧರಿಸಿಯೇ ಚುನಾವಣೆ ನಡೆಸಲಾಗುವುದು ಎಂದು ಆಯೋಗದ ಮೂಲಗಳು ಹೇಳಿವೆ.