ಶಿವಮೊಗ್ಗ : ನಗರದಲ್ಲಿಂದು ಹೋಳಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಯುವಕರು- ಯುವತಿಯರು ಸೇರಿದಂತೆ ಎಲ್ಲಾ ವಯೋಮಾನದವರು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಪ್ರಾರಂಭದಲ್ಲೇ ಹಿಂದೂ ಕೇಸರಿ ಅಲಂಕಾರ ಸಮಿತಿವತಿಯಿಂದ ‘ವಂದೇ ಮಾತರಂ’ ಗೀತೆ ನುಡಿಸುವುದರ ಮೂಲಕ ರಾಷ್ಟ್ರಕ್ಕೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ನಗರದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಹೋಳಿ ಹಬ್ಬವನ್ನು ಮಕ್ಕಳು, ಯುವಕರು- ಯುವತಿಯರು ಸೇರಿದಂತೆ ಎಲ್ಲರೂ ಸಂಭ್ರಮದಿಂದ ಆಚರಿಸಿದರು.
ನಗರದ ದುರ್ಗಿಗುಡಿಯ ದುರ್ಗಮ್ಮನ ಬೀದಿಯಲ್ಲಿನ ದುರ್ಗಮ್ಮ ಮತ್ತು ಮರಿಯಮ್ಮನವರ ರಥೋತ್ಸವ ಹೋಳಿ ಹುಣ್ಣಿಮೆ ದಿನ ನಡೆಯುತ್ತದೆ. ರಥೋತ್ಸವ ಇರುವ ಕಾರಣಕ್ಕೆ ಯಾರೂ ಸಹ ಹೋಳಿ ಆಚರಿಸುವುದಿಲ್ಲ. ರಥೋತ್ಸವದ ಮರುದಿನ ದೇವಾಲಯದಲ್ಲಿ ಓಕುಳಿ ಆಚರಣೆ ಇರುತ್ತದೆ. ಹೀಗಾಗಿ, ಶಿವಮೊಗ್ಗ ನಗರವೇ ದೇವಿಯರ ಓಕುಳಿಯಂದು ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಈ ಪದ್ಧತಿಯನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.

ಬೆಳಗ್ಗೆಯೇ ದೇವಾಲಯದ ಬಳಿ ಬಂದು ಓಕುಳಿಯನ್ನು ಮೈಮೇಲೆ ಹಾಕಿಸಿಕೊಂಡು ಹೋಳಿ ಆಚರಣೆಗೆ ತೆರಳುತ್ತಾರೆ. ಹೀಗಾಗಿ ಗಲ್ಲಿ ಗಲ್ಲಿಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಕಂಡುಬಂತು. ಗಾಂಧಿಬಜಾರಿನ ಬಸವೇಶ್ವರ ದೇವಸ್ಥಾನದ ಎದುರು ಗಾಂಧಿಬಜಾರ್ ಗೆಳೆಯರ ಬಳಗದಿಂದ ಸಂಭ್ರಮದ ಹೋಳಿಹಬ್ಬ ಆಚರಿಸಲಾಯಿತು. ಅಲ್ಲದೆ ನಗರದ ಸೀನಪ್ಪಶೆಟ್ಟಿ ವೃತ್ತ (ಗೋಪಿವೃತ್ತ)ವು ಬುಧವಾರ ರಂಗಿನ ಅಂಗಳವಾಗಿ ಕಂಗೊಳಿಸುತ್ತಿತ್ತು. ಭ್ರಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬ ನಗರದ ಜನತೆಯ ಮನಸ್ಸನ್ನು ಓಕುಳಿಯಲ್ಲಿ ತೇಲಿಸಿತು.
ಹಿರಿಯ-ಕಿರಿಯರೆನ್ನದೆ, ಜಾತಿ ಭೇದ-ಭಾವ ಮರೆತು ಭಾವೈಕ್ಯದಿಂದ ಕೂಡಿ ಬಣ್ಣದ ಜಗತ್ತಿನಲ್ಲಿ ಮಿಂದೆದ್ದರು. ಕಳೆದ. ಈ ಬಾರಿಯೂ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಅದ್ಧೂರಿಯಾಗಿ ರಂಗಿನ ಹಬ್ಬ ಆಚರಿಸಲು ಅವಕಾಶ ಕಲ್ಪಿಸಲಾಗಿತ್ತು. ನೃತ್ಯ, ಡಿಜೆ ಸೌಂಡ್, ಒಬ್ಬರಿಗೊಬ್ಬರು ನೀರೆರೆಚುವ ಮೂಲಕ ಸಾವಿರಾರು ಯುವಕ-ಯುವತಿಯರು ಖುಷಿಯ ಸಾಗರದಲ್ಲಿ ಕುಣಿದು ಕುಪ್ಪಳಿಸಿದರು. ತಣ್ಣೀರಧಾರೆ ಹರಿಯಲು ವ್ಯವಸ್ಥೆ ಮಾಡಲಾಗಿತ್ತು.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ರಂಗುರಂಗಿನ ಬಣ್ಣ ಎರೆಚುತ್ತಾ, ಕುಣಿದು ಕುಪ್ಪಳಿಸಿದರು. ಕೆಲವರು ಹಾಡುಗಳಿಗೆ ಹಜ್ಜೆ ಹಾಕಿದರು. ಕೆಲವರು ತಮ್ಮ ಮಕ್ಕಳನ್ನು ಕರೆತಂದು ಓಕುಳಿ ಆಟವಾಡಿ ಖುಷಿಪಟ್ಟರು. ಯುವಕರು ಹಾಡುಗಳಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು. ಈ ಬಾರಿ ಮಹಿಳೆಯರು, ಯುವತಿಯರೇ ಹೆಚ್ಚಿನ ಸಂಖ್ಯೆಯದ್ದರು.
ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಕಾರಣ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದವರು ಈ ರಸ್ತೆಗಳಲ್ಲಿ ತಮ್ಮ ವಾಹನಗಳ ಪಾರ್ಕಿಂಗ್ ಮಾಡಿದ್ದರು. ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

ಎಂ.ಜಿ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ವೀಕ್ಷಿಸಿದರು. ಮೈತುಂಬ ಬಣ್ಣ ಹಚ್ಚಿಕೊಂಡ ಜನರು, ಸೆಲ್ಫಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ಅದೇ ರೀತಿ ನಗರದ ವಿವಿಧ ಬಡಾವಣೆಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕುಟುಂಬದವರು, ಸ್ನೇಹಿತರು ಬಣ್ಣ ಹಚ್ಚಿಕೊಂಡು ಖುಷಿ ಪಟ್ಟರು. ಕೆಲಸದ ನಡುವೆಯೂ ಮುಂಜಾನೆ ಪ್ರತಿ ಮನೆಗಳಲ್ಲಿ ಹೋಳಿ ಹಬ್ಬವನ್ನು ಆಚರಿಸಿದರು.
ಯುವಕ-ಯುವತಿಯರು, ಮುಂಜಾನೆಯಿಂದಲೇ ರಸ್ತೆಗಿಳಿದು ಸ್ನೇಹಿತರ ಜೊತೆಗೂಡಿ ಬೈಕ್ ರ್ಯಾಲಿ ನಡೆಸುವ ಮೂಲಕ ಬಣ್ಣ ಎರಚಿ ಹಬ್ಬಕ್ಕೆ ಮೆರುಗು ತಂದು ಕೊಟ್ಟರು. ನಗರದ ಮುಖ್ಯ ಬಸ್ ನಿಲ್ದಾಣ, ಗಾಂಧಿ ಬಜಾರ್, ಕೋಟೆ ರಸ್ತೆ, ಹೊಳೆ ಬಸ್ ನಿಲ್ದಾಣ, ವಿದ್ಯಾನಗರ ಸೇರಿ ಪೊಲೀಸ್ ಚೌಕಿಯಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು. ಬಣ್ಣಗಳನ್ನು ಎಲ್ಲರೂ ಸೇರಿ ಎರಚುವುದು ಸಹಿಷ್ಣುತೆಯ ಸಂಕೇತ. ಭೇದ ಮರೆತು ಶುದ್ಧ ಮನಸ್ಸಿನಿಂದ ಹೋಳಿ ಹಬ್ಬ ಆಚರಿಸುವ ಮೂಲಕ ಒಗ್ಗಟ್ಟಿಗೆ ನಾಂದಿ ಹಾಡಿದರು. ಆದರೆ ಹೋಳಿ ಸಂಭ್ರಕ್ಕೆ ಕಪ್ಪುಚುಕ್ಕೆ ಎಂಬಂತೆ ಕೆಲವು ಪಡ್ಡೆ ಹುಡುಗರು ಕರ್ಕಶ ಶಬ್ಧದ ಸೈಲೆನ್ಸ್ರ್ ಅಳವಡಿಸಿ ಬೈಕ್ನಲ್ಲಿ ಜಾಲಿರೈಡ್ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಪ್ರಮುಖ ಪಕ್ಷಗಳ ರಾಜಕೀಯ ನಾಯಕರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಶಾಸಕ ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ನ ಕೆಲ ಮುಖಂಡರು ಕೂಡ ಹಾಡಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಹೋಳಿ ಹಬ್ಬದ ಸಂಭ್ರಮದ ನಡುವೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.