ಶಿವಮೊಗ್ಗ: ಬಿಹೆಚ್ ರಸ್ತೆಯ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಅಗ್ನಿ ಅವಘಡ ಪ್ರಾತ್ಯಕ್ಷಿಕೆಯ ಅಣಕು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ದಳದ ಠಾಣಾಧಿಕಾರಿ ನರೇಂದ್ರ ಅವರು ಅಗ್ನಿ ಅವಘಡ, ಅವುಗಳನ್ನು ನಿಯಂತ್ರಿಸುವ ಕುರಿತು ಮಾಹಿತಿ ನೀಡಿದರು.
ಪ್ರಮುಖವಾಗಿ ಮನೆಗಳಲ್ಲಿ ಅಡುಗೆ ಅನಿಲ ಸೋರಿಕೆಯಾದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು. ಅಡುಗೆ ಅನಿಲದ ಒಲೆ ಮತ್ತು ಸಿಲಿಂಡರ್ಗೆ ಕನಿಷ್ಟ 5 ಅಡಿ ಅಂತರವಿರಬೇಕು. ಮತ್ತು ಸಿಲಿಂಡರ್ ಕಾಲಾವಧಿ ಅದರ ತುದಿಯಲ್ಲಿ ಎ, ಬಿ.ಸಿ. ಡಿ ಎಂದು ಹಾಕಿ ಇಸವಿ ನಮೂದಿಸಿರುತ್ತಾರೆ. ಅದನ್ನು ತಿಳಿದುಕೊಳ್ಳಬೇಕು. ಆ ಇಸವಿಯ ಒಳಗೆ ಮಾತ್ರ ಅದನ್ನು ಬಳಸಬೇಕು. ಒಂದು ವೇಳೆ ಸರಬರಾಜುದಾರರು ಅವಧಿ ಮುಗಿದ ಸಿಲಿಂಡರ್ ಗಳನ್ನು ನೀಡಿದ್ದಲ್ಲಿ ನಿಮಗೆ ಅದರ ಅರಿವಿರಬೇಕು. ಕೂಡಲೇ ಅದನ್ನು ಹಿಂತಿರುಗಿಸಬೇಕು ಎಂದು ಮಾಹಿತಿ ನೀಡಿದರು.
ಪ್ರಮುಖವಾಗಿ ಶಾಲಾ ಕಾಲೇಜುಗಳು ಸಿನಿಮಾ ಮಂದಿರಗಳು, ಹಾಸ್ಟೆಲ್ಗಳು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ವರ್ತಿಸಬೇಕು ಎಂಬುದನ್ನು ತಿಳಿಸಿದ ಅವರು ಕೂಡ 112 ಗೆ ಕರೆ ಮಾಡಿದರೆ ಅಗ್ನಿಶಾಮಕ ದಳಕ್ಕೆ ಅವಘಡ ಸಂಭವಿಸಿದ ಸ್ಥಳದ ಲೋಕೇಷನ್ ಸಹಿತ ಮಾಹಿತಿ ಸಿಗುತ್ತದೆ ಎಂದರು.
ಅಗ್ನಿಶಾಮಕ ದಳದಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಗಳಿದ್ದಾರೆ. ನೀರು ಮತ್ತು ಅಗ್ನಿ ಅಪಘಾತಗಳು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯಾಚರಿಸಲು ಅಗ್ನಿಶಾಮಕ ದಳದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿವೆ. ಇದರ ಅರಿವು ಪ್ರತಿಯೊಬ್ಬರಿಗೆ ಇರಬೇಕು. ಅವಘಡ ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಹೆಚ್. ಜಯಂತ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಚನ್ನವೀರಪ್ಪ ಗಾಮನಗಟ್ಟಿ ಹಾಗೂ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.