ಶಿವಮೊಗ್ಗ .ಜ.27 :ಸಾಗರ : ರಾಜ್ಯದಲ್ಲಿ ಮುಂದಿನ ಅವಧಿಯಲ್ಲೂ ಕಾಂಗ್ರೇಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡೈನಾಮಿಕ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗಾಂಧಿನಗರದ ಸ್ವಗೃಹದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡಿರುವ ಕಾರ್ಯಕ್ರಮಗಳು ಜನರ ಮನಸ್ಸು ಗೆದ್ದಿದ್ದು, ಮುಂದಿನ ಅವಧಿಗೆ ಸಹ ನಮ್ಮದೆ ಸರ್ಕಾರ ಖಂಡಿತಾ ಬರುತ್ತದೆ ಎಂದು ಭವಿಷ್ಯ ನುಡಿದರು.
ಸದ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತೆ ಆಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಕಂಡರೆ ಪಕ್ಷದಲ್ಲಿ ಯಾರಿಗೂ ಆಗುತ್ತಿಲ್ಲ. ವಿಜಯೇಂದ್ರ ಅವರ ದಬ್ಬಾಳಿಕೆ, ಸರ್ವಾಧಿಕಾರಿ ಧೋರಣೆಯಿಂದ ಬಿಜೆಪಿಯ ಬಹುತೇಕ ಪ್ರಮುಖರು ಬೇಸತ್ತಿದ್ದಾರೆ. ಸದ್ಯದಲ್ಲಿಯೆ ಜೆಡಿಎಸ್ ಮತ್ತು ಬಿಜೆಪಿಯಿಂದ ಕಾಂಗ್ರೇಸ್ ಪಕ್ಷಕ್ಕೆ ಶಾಸಕರು ದೊಡ್ಡ ಸಂಖ್ಯೆಯಲ್ಲಿ ಬರಲಿದ್ದಾರೆ. ಪಕ್ಷದ ತತ್ವಸಿದ್ದಾಂತವನ್ನು ಒಪ್ಪಿ ಶ್ರೀರಾಮುಲು ಸೇರಿದಂತೆ ಯಾರೇ ಬಂದರು ಕಾಂಗ್ರೇಸ್ ಪಕ್ಷ ಸ್ವಾಗತಿಸುತ್ತದೆ. ಯಡಿಯೂರಪ್ಪ ನಮ್ಮ ಜಿಲ್ಲೆಯ ಹಿರಿಯರು. ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಂತೆ ಯಡಿಯೂರಪ್ಪ ಅವರನ್ನು ಸಹ ನಾನು ಗುರುಗಳಂತೆ ನೋಡುತ್ತೇನೆ ಎಂದು ಹೇಳಿದರು
.
ತಾಲ್ಲೂಕಿನಲ್ಲಿ ಆನೆದಾಳಿಯಿಂದ ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಕಾಡನ್ನು ವಿಪರೀತವಾಗಿ ಕಡಿದಿದ್ದರಿಂದ ಆನೆ, ಮಂಗಗಳು ನಾಡಿಗೆ ನುಗ್ಗುತ್ತಿದೆ. ಆದರೆ ಶಾಸಕ ಅರಗ ಜ್ಞಾನೇಂದ್ರ ಹಿಂದೂಗಳ ಪೂಜಿಸುವ ಮಂಗ, ಆನೆ ನಾಡಿಗೆ ನುಗ್ಗುತ್ತದೆ, ಅವುಗಳನ್ನು ಕೊಲ್ಲಲು ಅವಕಾಶ ನೀಡಿ ಎಂದು ಹೇಳಿರುವುದು ದುರದೃಷ್ಟಕರ. ಇಂತಹ ಮಾತನಾಡುವ ಅರಗ ಅವರು ಹೇಗೆ ಹಿಂದುತ್ವದ ಪ್ರತಿಪಾದಕರಾಗುತ್ತಾರೆ ಎಂದು ಪ್ರಶ್ನಿಸಿದ ಬೇಳೂರು, ಮಾಜಿ ಶಾಸಕ ಹರತಾಳು ಹಾಲಪ್ಪ ಆನೆದಾಳಿಯಾದಾಗ ನಾನು ಫಾರಿನ್ ಹೋಗಿದ್ದೇ ಎಂದು ಹೇಳಿದ್ದಾರೆ. ನಾನು ಫಾರಿನ್ ಹೋಗುವಾಗ ಮೃತ ರೈತನಿಗೆ ಒಂದು ಲಕ್ಷ ವೈಯಕ್ತಿಕ ಪರಿಹಾರ ನೀಡಿ, ನಂತರ ಸರ್ಕಾರದಿಂದ ೧೫ ಲಕ್ಷ ಪರಿಹಾರ ಕೊಡಿಸಿದ್ದೇನೆ. ಅನಗತ್ಯವಾಗಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಖಾರವಾಗಿ ಹೇಳಿದರು.
ಕ್ಷೇತ್ರವ್ಯಾಪ್ತಿಯಲ್ಲಿ ಮಳೆಹಾನಿಯಿಂದ ಉಂಟಾದ ಪರಿಹಾರವನ್ನು ನೀಡಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಅನುಷ್ಟಾನಕ್ಕೆ ತರಲಾಗುತ್ತದೆ. ಶರಾವತಿ ಹಿನ್ನೀರಿನಿಂದ ಮೂರು ಹೋಬಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಕಾಮಗಾರಿಗೆ ಶೀಘ್ರದಲ್ಲಿಯೆ ಸಚಿವರ ಮೂಲಕ ಚಾಲನೆ ನೀಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತೀವೃ ಅನಾರೋಗ್ಯದಿಂದ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ಉಮೇಶ್ ಮೊಗವೀರ ಅವರಿಗೆ ಶಾಸಕರು ವೈಯಕ್ತಿಕವಾಗಿ ರೂ. ೨೫ಸಾವಿರ ಧನಸಹಾಯವನ್ನು ಪತ್ರಕರ್ತರ ಸಂಘದ ಮೂಲಕ ಉಮೇಶ್ ಮೊಗವೀರ ಕುಟುಂಬಕ್ಕೆ ನೀಡಿದರು