ಶಿವಮೊಗ್ಗ : ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಚಕ್ರಾನಗರ ಮಾರ್ಗದ ಬಿಳಗಿನಮನೆ ಸಮೀಪ ನಿಧಿಯಾಸೆಗೆ ದುಷ್ಕರ್ಮಿಗಳು ಬೃಹತ್ ನಿಲುವುಗಲ್ಲನ್ನು ಧ್ವಂಸಗೊಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಗ್ರಾಮಸ್ಥರಿಗೆ ಪ್ರಕರಣ ಕಂಡು ಬಂದಿದ್ದು, ರವಿವಾರ ರಾತ್ರಿ ಈ ಕೃತ್ಯ ನಡೆದಿದೆ.
ಸುಮಾರು 7 ಅಡಿ ಎತ್ತರದ ಬೃಹತ್ ಗಾತ್ರದ ನಿಲುವುಗಲ್ಲನ್ನು ಕಿತ್ತು ಅದರ ಬುಡದಲ್ಲಿ ಗುಂಡಿ ತೋಡಲಾಗಿದೆ. ಪಕ್ಕದಲ್ಲಿ ಕಲ್ಲು ಒಡೆಯುವ ಚೇಣು, ಮದ್ಯದ ಪ್ಯಾಕೆಟ್ , ಲಿಂಬೆ ಹಣ್ಣು ಕಂಡು ಬಂದಿದೆ.
ಚಕ್ರಾನಗರಕ್ಕೆ ಸಾಗುವ ರಸ್ತೆ ಮಾರ್ಗದ ಪಕ್ಕದಲ್ಲೇ ಈ ಕೃತ್ಯ ಎಸಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಬಿದನೂರು ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಧಿಗಾಗಿ ಶೋಧನಾ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಈವರೆಗೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಪೊಲೀಸ್ ಇಲಾಖೆ ನಿಧಿ ಶೋಧನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳನ್ನು ಪತ್ತೆ ಮಾಡುವಂತೆ ಸ್ಥಳೀಯರು ಆಗ್ರಹಿದ್ದಾರೆ.
ನಿಲುವುಗಲ್ಲು ಧ್ವಂಸಗೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ವೀಕ್ಷಿಸಲು ಧಾವಿಸಿದ್ದಾರೆ. ಸಾರ್ವಜನಿಕರ ಮಾಹಿತಿ ಆಧಾರದ ಮೇಲೆ ಪಿಎಸ್ಐ ಶಿವಾನಂದ ಕೋಳಿ, ಎಎಸ್ಐ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.