ಶಿವಮೊಗ್ಗ ಜ .03 : ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ಗೋ ಶಾಲೆಗಳನ್ನು ತೆರೆಯುವುದಿಲ್ಲ ಎಂಬ ಸರ್ಕಾರದ ನಿರ್ಧಾರ ಹಿಂದೂ ಸಮಾಜದ ವಿರುದ್ಧವಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ಜಿಲ್ಲೆಗೂ ಒಂದು ಗೋಶಾಲೆ ಆರಂಭಿಸಬೇಕು ಎಂದು ನಿರ್ಧರಿಸಿ ೧೪ ಗೋಶಾಲೆಗಳನ್ನು ತೆರೆಯಲಾಗಿತ್ತು. ಇನ್ನೂ ೨೪ ಗೋಶಾಲೆಗಳನ್ನು ಪ್ರಾರಂಭ ಮಾಡಬೇಕಿತ್ತು. ಆದರೆ, ಸರ್ಕಾರ ಯಾವುದೇ ಕಾರಣಕ್ಕೂ ಗೋಶಾಲೆಗಳನ್ನು ಪ್ರಾರಂಭ ಮಾಡುವುದಿಲ್ಲ ಎಂದು ನಿರ್ಣಯ ಕೈಗೊಂಡಿದೆ. ಇದು ತೀವ್ರ ಖಂಡನೀಯ ಎಂದರು.
ಇದಕ್ಕೆ ಕಾರಣವನ್ನು ಸರ್ಕಾರ ಕೊಡುವುದು ಆಶ್ಚರ್ಯವಾಗಿದೆ. ಗೋಶಾಲೆಗೆ ಗೋವುಗಳು ಬಾರದೇ ಇದ್ದುದರಿಂದ ಅವುಗಳನ್ನು ತೆರೆಯಲಾಗುವುದಿಲ್ಲ ಎನ್ನುತ್ತಾರೆ. ಆದರೆ, ಶಿವಮೊಗ್ಗವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಬ್ರಾಹ್ಮಣ ಸಂಘ, ದೈವಜ್ಞ, ಜೈನ ಸಮಾಜದವರು ಗೋಶಾಲೆ ನಡೆಸುತ್ತಿದ್ದಾರೆ. ಅಲ್ಲಿ ಗೋವುಗಳೇ ಹೆಚ್ಚಾಗಿವೆ. ಸರ್ಕಾರ ಮಾತ್ರ ಗೋವುಗಳು ಬರುತ್ತಿಲ್ಲ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದರು.
ಉರ್ದು ಶಾಲೆ ಮತ್ತು ಮದರಸಾಗಳಲ್ಲಿ ಮಕ್ಕಳಿಲ್ಲ ಎಂದರೆ ಈ ಸರ್ಕಾರ ಅವುಗಳನ್ನು ಮುಚ್ಚಿಬಿಡುತ್ತಾ? ಏಕೆ ಹಿಂದೂ ಸಮಾಜದ ಮೇಲೆ ಅವರಿಗೆ ಈ ಆಕ್ರೋಶ? ಹಿಂದೂ ಸಮಾಜವನ್ನು ಹಗುರವಾಗಿ ತೆಗೆದುಕೊಳ್ಳಲಾಗುತ್ತಿದೆ. ಹಿಂದೂಗಳು ಸುಮ್ಮನಿದ್ದಾರೆ ಎಂದು ಇದರ ಅರ್ಥವೇ? ತಕ್ಷಣವೇ ಈ ನಿರ್ಣಯ ವಾಪಸ್ ತೆಗೆದುಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಗೋಶಾಲೆಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ದನದ ಮಾಂಸ ನದಿಗೆ ಎಸೆದು ಅಪವಿತ್ರ:
ಕೆಲವು ಕಿಡಿಗೇಡಿಗಳು ದನಗಳನ್ನು ಕಡಿದು ಅದರ ತಲೆ, ಕರುಳು, ಮುಂತಾದ ತ್ಯಾಜ್ಯಗಳನ್ನು ಬೇಕು ಎಂತಲೇ ಮೃತ್ಯುಂಜಯ ನದಿಗೆ ಬಿಡುತ್ತಿದ್ದಾರೆ. ಈ ತ್ಯಾಜ್ಯ ಮುಂದೆ ನೇತ್ರಾವತಿ ನದಿ ಸೇರುತ್ತದೆ. ಧರ್ಮಸ್ಥಳದ ಬಳಿ ಈ ನೇತ್ರಾವತಿ ನದಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ. ನದಿಯನ್ನೇ ಅಪವಿತ್ರಗೊಳಿಸುವ ಹುನ್ನಾರ ಇದರ ಹಿಂದೆ ಇದೆ. ಇದು ಈ ಸರ್ಕಾರಕ್ಕೆ ಗೊತ್ತಿಲ್ಲವೇ? ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಈ ರೀತಿ ದನದ ಮಾಂಸವನ್ನು ನದಿಗೆ ಎಸೆದು ಅಪವಿತ್ರಗೊಳಿಸುವುದನ್ನು ಹಿಂದೂಗಳು ಹೇಗೆ ಸಹಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ಕಲಬುರಗಿಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆಯವರ ಹೆಸರು ಬಂದಿದೆ. ಡೆತ್ ನೋಟ್ ನಲ್ಲಿ ಹೆಸರಿದೆ ಎನ್ನುತ್ತಾರೆ. ಕಾಂಗ್ರೆಸ್ ನವರು ಇಲ್ಲ ಎನ್ನುತ್ತಿದ್ದಾರೆ. ಅದೇನೆ ಆಗಲಿ, ನನ್ನ ಮೇಲೆ ಆರೋಪ ಬಂದಾಗ ನಾನು ರಾಜೀನಾಮೆ ನೀಡಿದ್ದೆ. ಆಗ ನನಗೆ ಬಹಳಷ್ಟು ಜನ ತೊಂದರೆ ಕೊಟ್ಟಿದ್ದರು. ಈಗ ಅವರೇ ಅದನ್ನು ಅನುಭವಿಸುತ್ತಿದ್ದಾರೆ. ಮೇಲೊಬ್ಬ ಭಗವಂತನಿದ್ದಾನೆ. ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಾನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಉಮೇಶ್ ಆರಾಧ್ಯ, ಎಂ. ಶಂಕರ್, ಬಾಲು, ಶಿವಾಜಿ, ಕಿಟ್ಟಿ, ಠಾಕ್ರಾನಾಯ್ಕ, ಮಂಜುನಾಥ್, ಶಂಕ್ರಾನಾಯ್ಕ್, ಕುಬೇರಪ್ಪ ಮುಂತಾದವರಿದ್ದರು.