ಶಿವಮೊಗ್ಗ ಜ .03:: ಕಲಿಕೆ ಕೇವಲ ಶೈಕ್ಷಣಿಕ ಗುರಿಯಷ್ಟೇ ಅಲ್ಲ ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವ ಸಮಗ್ರ ಪ್ರಕ್ರಿಯೆಯಾಗಿದೆ. ಆಯುರ್ವೇದ ಕ್ಷೇತ್ರದಲ್ಲಿ ಸಾಧಗೆ ಮನಸ್ಸು ಮತ್ತು ಆತ್ಮವನ್ನು ಕೇಂದ್ರೀಕರಿಸಬೇಕು. ಆಯುರ್ವೇದ ಕೇವಲ ಔಷಧ ನೀಡುವುದಷ್ಟೇ ಅಲ್ಲ ಅದೊಂದು ಜೀವನ ಪದ್ಧತಿ ಎಂದು ಹೆಚ್ಆರ್ಡಿ ತರಬೇತುದಾರರು ಮತ್ತು ಸ್ಟೇಟ್ ಹೆಡ್ಕ್ವಾಟ್ರಸ್ ಕಮೀಷನರ್ (ಗೈಡ್ಸ್) ಡಾ.ಮುಕ್ತ ಬಿ. ಕಗ್ಗಲಿ ಹೇಳಿದರು.
ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಅಸ್ಪತ್ರೆ ವತಿಯಿಂದ ಜನವರಿ ೩ರ ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಸದರಿ ಕಾಲೇಜಿನ ಆವರಣದಲ್ಲಿ ಶಿಷ್ಯ ದೀಕ್ಷಾ ಪರಂಪರೆ (ಶಿಷ್ಯೋಪನಯನ), ಘಟಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಿ ಪದ್ಧತಿಯಾಗಿರುವ ಆಯುರ್ವೇದ ಚಿಕಿತ್ಸಾ ಪದ್ಧತಿಯು ವಿಶ್ವದ ವಿವಿಧ ದೇಶಗಳಿಗೆ ವಿಸ್ತರಿಸುತ್ತಿದೆ. ಹೆಚ್ಚು ವೆಚ್ಚವಿಲ್ಲದೆ ಸಾಮಾನ್ಯ ಜನರ ಆರೋಗ್ಯ ರಕ್ಷಣೆಗೆ ಆಧಾರವಾಗಿದೆ. ಇಂದಿನ ಆಧುನಿಕ ಕಾಲಮಾನದಲ್ಲಿ ಜನರು ಮಾಡುವ ವಿವಿದೆಲ್ಲಾ ವೆಚ್ಚಗಳಿಗಿಂತ ವೈದ್ಯಕೀಯ ವೆಚ್ಚವೇ ಹೆಚ್ಚಾಗಿದೆ. ಆದ್ದರಿಂದ ಅತ್ಯಂತ ಸರಳ ಮತ್ತು ಸುಲಭವಾದ ಮತ್ತು ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಚಿಕಿತ್ಸೆ ನಮಗೆ ಬೇಕಾಗಿದೆ ಎಂದರು.
ಅದರಲ್ಲೂ ಗ್ರಾಮೀಣ ಬಡ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಶ್ರೀರಕ್ಷೆಯಾಗಬೇಕಾಗಿದೆ. ಈ ಅಗತ್ಯ ಪೂರೈಸಲು ತೆಗ್ಗಿನಮಠದ ಸ್ವಾಮೀಜಿಯವರು ಆಯುರ್ವೇದ ಕಾಲೇಜು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಟಿಎಂಎಇ ಸೊಸೈಟಿಯ ಅಧ್ಯಕ್ಷರು, ಹರಪನಹಳ್ಳಿ ತೆಗ್ಗಿನಮಠದ ಪೀಠಾಧ್ಯಕ್ಷರಾದ ಷ.ಬ್ರ. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆರ್ಜಿಯುಹೆಚ್ಎಸ್ನ ಸೆನೆಟ್ ಸದಸ್ಯ ಡಾ. ಕಿರಣ್ ಕುಮಾರ್ ಕೆ., ಆಗಮಿಸಿದ್ದರು.
ವೇದಿಕೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ್ ನೆಲ್ಲೀಸರ, ಟಿಎಂಎಇಎಸ್ ಆರ್ಯುವೇದ ಕಾಲೇಜು ಮತ್ತು ಅಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಪ್ರಾಂಶುಪಾಲರಾದ ಡಾ. ರುದ್ರಾಂಬಿಕ ಬಿರಾದಾರ, ಉಪ ಪ್ರಾಂಶುಪಾಲ ಡಾ. ಸದಾನಂದ ಜೋಷಿ, ವಾಸ್ತು ತಜ್ಞ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಡಾ.ಬಿ.ಎನ್. ಸುಷ್ಮಾ ಮತ್ತು ಡಾ.ನಾಗರಾಜ ಎಸ್. ಅಂಗಡಿ ಶಿಷ್ಯ ಸಂಸ್ಕಾರ ಬೋಧಿಸಿದರು. ವಿದ್ಯಾರ್ಥಿನಿ ಲಕ್ಷ್ಮಿ ಪ್ರಾರ್ಥಿಸಿ, ಡಾ. ದಾತ್ರಿ ದತ್ತ ಸ್ವಾಗತಿಸಿ, ಸಂತೋಷ್ ಕುಮಾರ್ ಪ್ರಾಸ್ತಾವಿಸಿ, ಪ್ರೊ.ಎಸ್.ಬಿ. ಪ್ರಶಾಂತ್ ನಿರೂಪಿಸಿದರು.