ಶಿವಮೊಗ್ಗ,ಡಿ.10: ವಿಕಲಚೇತನರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಿಕಲಚೇತನ ಗ್ರಾಮೀಣ ಪುನರ್‍ವಸತಿ ಕಾರ್ಯಕರ್ತರು ಡಿ.13ರಂದು ಬೆಳಗಾವಿ ಸುವರ್ಣ ಸೌಧದ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ನವಕರ್ನಾಟಕ ವಿಕಲ ಚೇತನರ ಗೌರವಧನ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಯಶೋಧ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣದ ಇಲಾಖೆ ವತಿಯಿಂದ ಕಳೆದ 17 ವರ್ಷಗಳ ಹಿಂದೆ ಗ್ರಾಮೀಣ ಪುನರ್‍ವಸತಿ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಎಂಆರ್‍ಡಬ್ಲ್ಯೂ, ವಿಆರ್‍ಡಬ್ಲ್ಯೂ, ಯುಆರ್‍ಡಬ್ಲ್ಯೂ ಎಂದು ವಿಂಗಡಿಸಿ ವೇತನ ನೀಡಲಾಗುತ್ತಿತ್ತು. 9ಸಾವಿರದಿಂದ 15 ಸಾವಿರ ರೂ.ಗಳ ವರೆಗೆ ಮಾಸಿಕ ವೇತನ ನೀಡುತ್ತಿದ್ದು, ಈ ವೇತನವು ಯಾವುದಕ್ಕೂ ಸಾಲದಾಗಿದೆ ಎಂದರು.
ನಮ್ಮ ಕೆಲಸಗಳ ಜವಬ್ದಾರಿ ಕೂಡ ಹೆಚ್ಚಿದೆ. ಸುಮಾರು 21 ಬಗೆಯ ವಿಕಲಚೇತನರನ್ನು ಹಾಗೂ ಹಿರಿಯ ನಾಗರಿಕರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಮಹತ್ತರ ಜವಬ್ದಾರಿ ನಮ್ಮದಾಗಿದೆ. ಪ್ರತಿ ಗ್ರಾಮಪಂಚಾಯಿತಿಗೆ ಮತ್ತು ನಗರ ಮಟ್ಟದಲ್ಲೂ ಕೂಡ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ರಾಜ್ಯದಲ್ಲಿ ಸುಮಾರು 6880, ಜಿಲ್ಲೆಯಲ್ಲಿ 285 ಜನರು ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕಳೆದ 17 ವರ್ಷಗಳಿಂದ ನಮಗೆ ಸೇವಾ ಭದ್ರತೆ ಇಲ್ಲ. ಕನಿಷ್ಟ ವೇತನವು ಇಲ್ಲ, ಪಿಎಫ್ ಇಲ್ಲ, ಇಎಸ್‍ಐ ಇಲ್ಲ ಆದ್ದರಿಂದ ನಮ್ಮನ್ನು ಕಾಯಂಗೊಳಿಸುವುದು ಸೇರಿದಂತೆ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮನ್ನು ಕಾಯಂಗೊಳಿಸಲು ಆಗದಿದ್ದರೆ ಅಲ್ಲಿಯವರೆಗೆ ಕನಿಷ್ಠ 35 ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಶ್ರೀಕಾಂತ್, ಕೃಷ್ಣನಾಯಕ್, ಬಸವಕುಮಾರ್, ಶೇಖರಪ್ಪ, ಲಕ್ಷ್ಮಣ್,ಯುವರಾಜ್, ಗಜೇಂದ್ರ, ಗಂಗಾಧರ್, ಚಂದ್ರಯ್ಯ, ಪರಮೇಶ್ವರಪ್ಪ ಮುಂತಾದವರು ಇದ್ದರು.