ಶಿವಮೊಗ್ಗ ಡಿಸೆಂಬರ್ 10:
ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗದ ವತಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದಿನಿAದ ಮೂರು ದಿನಗಳ ಕಾಲ ಅಯೋಜಿಸಿರುವ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವಕ್ಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಹ್ಯಾದ್ರಿ ಉತ್ಸವ ರಾಜ್ಯದ ವಿವಿಧ ಬಗೆಯ ಸಾಂಸ್ಕೃತಿಕ ವೈವಿದ್ಯತೆಯನ್ನು ಪ್ರತಿನಿಧಿಸುವ ಉತ್ಸವವಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಸೊಬಗನ್ನು ಪರಿಚಯಿಸಲು ಇದು ಸಹಕಾರಿಯಾಗಿದೆ. ವಿವಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಭಾಗವಹಿಸಿದ್ದಾರೆ.
ಅಂತರ್ ಕಾಲೇಜು ವಿದ್ಯಾರ್ಥಿಗಳಲ್ಲಿ ಭಾಂದವ್ಯವನ್ನು ಮೂಡಿಸುವ ವೇದಿಕೆಯಾಗಿದ್ದು ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ. ಈ ಉತ್ಸವದಿಂದ ವಿವಿಯ ಹೆಸರು ಇನ್ನೂ ಹೆಚ್ಚು ಪ್ರಜ್ವಲಿಸಲಿದ್ದು, ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳು ಮಾತ್ರವಲ್ಲದೇ ಜಿಲ್ಲೆಯ 80 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಹಲವಾರು ವರ್ಷಗಳಿಂದ ಸಹ್ಯಾದ್ರಿ ಉತ್ಸವ ನಿಂತುಹೋಗಿತ್ತು ವಿವಿಯ ಎಲ್ಲಾ ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿಗಳ ಶ್ರಮದಿಂದ ಪುನರ್ ಆರಂಭಿಸಲಾಗಿದೆ. 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ರೀತಿಯ ಸ್ಪರ್ದೆಗಳು ಮೂರು ದಿನಗಳ ಕಾಲ ನಡೆಯಲಿದ್ದು ಇಡೀ ವಿಶ್ವವಿದ್ಯಾಲಯದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ ಎಂದರು.
ಮೆರವಣಿಗೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಕಲಾಮೇಳಗಳು, ವೇಷಭೂಷಣಗಳು ಗಮನ ಸೆಳೆದಿದ್ದು, ಡೊಳ್ಳು ಕುಣಿತ, ಯಕ್ಷಗಾನ, ಬಯಲಾಟ, ಮಲೆನಾಡಿನ ಪುರುಷ ಮತ್ತು ಮಹಿಳೆಯರ ಸಾಂಪ್ರದಾಯಿಕ ಉಡುಪು, ದೀವರ ಸಂಸ್ಕೃತಿ, ಕೊಡವ, ಲಂಬಾಣಿ, ಬುಡಕಟ್ಟು ವೇಷಧಾರಿಗಳು, ಪೂಜಾ ಕುಣಿತ, ಹುಲಿಕುಣಿತ, ಕಾಂತಾರ ದೈವ ಕುಣಿತ, ದಸರ ಉತ್ಸವದ ನವ ದುರ್ಗೆಯರ ಅವತಾರ, ಸೋಮನಕುಣಿತ, ನಂದಿಕೋಲು, ವೀರಗಾಸೆ, ಕಂಸಾಲೆ, ವೀರನಾರಿಯರು, ದೇವತೆಗಳ ಅಷ್ಟವತಾರ, ಸಾಧಕರು ಮತ್ತಿತರ ವೇಷಭೂಷಣಗಳನ್ನು ಧರಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಆಯ್ದ ಕಾಲೇಜುಗಳ ಸುಮಾರು 3000ಕ್ಕೂ ಹೆಚ್ಚಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಂಸ್ಕೃತಿಕ ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ವಿವಿ ಕುಲಸಚಿವ ಎ. ಎಲ್. ಮಂಜುನಾಥ್, ಎಸ್. ಎಂ. ಗೋಪಿನಾಥ್, ಕಾರ್ಯಕ್ರಮ ಸಂಚಾಲಕ ನೆಲ್ಲಿಕಟ್ಟೆ ಸಿದ್ದೇಶ್, ಸತ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.