ಶಿವಮೊಗ್ಗ, ಡಿ.10:
ಕಳೆದ ಒಂದು ತಿಂಗಳಿನಿಂದ ಶಿವಮೊಗ್ಗ ರಾಜೇಂದ್ರ ನಗರದ ರೈಲ್ವೆ ಟ್ರ್ಯಾಕ್ ಮತ್ತು ಪಾರ್ಕ್ ಮಧ್ಯದಲ್ಲಿ ಕುಡಿಯುವ ನೀರು ಸರಬರಾಜಿನ ಪೈಪ್ ನಲ್ಲಿ ಧಾರಾಕಾರವಾಗಿ ನೀರು ಹರಿದು ಹೋಗುತ್ತಿದ್ದರೂ ಸಹ ಇಲ್ಲಿಯವರೆಗೆ ಗಮನಿಸದ ಪಾಲಿಕೆ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ.
ಕಳೆದ ಸುಮಾರು ದಿನಗಳಿಂದ ಹೆಚ್ಚು ಜನ ಸೇರದ ಈ ಜಾಗದಲ್ಲಿ ಪೈಪ್ ಹೊಡೆದು ಹೋಗಿದ್ದು ಧಾರಾಕಾರವಾಗಿ ಸುಮಾರು ಐದು ಇಂಚಿನಷ್ಟು ನೀರು ಹರಿದು ಹೋಗುತ್ತಿದೆ. ಇದನ್ನು ಗಮನಿಸದ , ದೂರು ನೀಡಿದರೂ ಅಲಕ್ಷ್ಯದಿಂದ ಇರುವ ಇಲಾಖೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.
ಇಲ್ಲಿ ಸರಿಯಾಗಿ ಮನೆಗಳಿಗೆ ನೀರು ಕುಡಿಯುವ ನೀರು ಕೊಡಲಾಗದ ಇಲಾಖೆ ನೀರನ್ನು ಪೋಲಾಗುತ್ತಿದ್ದರು ಸಹ ಅದನ್ನು ಸರಿಪಡಿಸದೇ ಇರುವುದು ಜನರ ಆಕ್ರೋಶಕ್ಕೆ ತುತ್ತಾಗಿದೆ.
ಈ ಸಂಬಂಧ ರಾಷ್ಟ್ರಭಕ್ತ ಬಳಗದ ಮುಖಂಡ ಶ್ರೀಕಾಂತ್ ತೀವ್ರವಾಗಿ ಖಂಡಿಸಿದ್ದು, ಎಷ್ಟು ಬಾರಿ ಹೇಳಿದರೂ ಕೇಳದ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.