ಶಿವಮೊಗ್ಗ: ಗೋವಿಂದಾಪುರ, ಗೋಪಿಶೆಟ್ಟಿ ಕೊಪ್ಪ ಆಶ್ರಯ ಬಡಾವಣೆಗಳಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದೇ ಮನೆ ವಿತರಿಸಲು ಶಾಸಕರು ಹೊರಟಿದ್ದು, ಸರಿಯಲ್ಲ ಇದು ಬಡವರಿಗೆ ಮಾಡುತ್ತಿರುವ ಅನ್ಯಾಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಕುವೆಂಪು ರಂಗಮಂದಿರದಲ್ಲಿ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಲ್ಲಿ ಶಿಷ್ಟಾಚಾರವನ್ನು ಕೂಡ ಅವರು ಮರೆತಿದ್ದಾರೆ. ಶಿಷ್ಟಾಚಾರದ ಪ್ರಕಾರ ಸಚಿವ ಮಧು ಬಂಗಾರಪ್ಪ ಹಾಗೂ ಜಮೀರ್ ಅಹಮ್ಮದ್ ಅವರನ್ನು ಸಭೆಗೆ ಕರೆಯಬೇಕಿತ್ತು. ಅವರನ್ನು ಆಹ್ವಾನಿಸಿಯೂ ಇಲ್ಲ. ಅವರಿಗೆ ಹೇಳಿಯೂ ಇಲ್ಲ ಎಂದು ದೂರಿದರು.
ಇಷ್ಟಾದ ಮೇಲೆ ಶಾಸಕರು ನಮಗೆ ಹಕ್ಕುಚ್ಯುತಿ ಉಲ್ಲಂಘನೆಯಾಗಿದೆ ಎಂದು ಹೇಳುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರು ವಸತಿ ಸಚಿವ ಜಮೀರ್ ಅಹಮ್ಮದ್ ಅವರೊಂದಿಗೆ ಮಾತನಾಡಿ ಸದ್ಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ೧೫ ಕೋಟಿ ರೂ. ಕೊಡಿಸಲು ಮುಂದಾಗಿದ್ದರು. ಆದರೆ, ಸೌಜನ್ಯಕ್ಕೂ ಅವರನ್ನು ಕರೆಯದೇ ಶಾಸಕ ಚನ್ನಬಸಪ್ಪ ಅವರು ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಂದಾಗಿರುವುದು ಹಕ್ಕುಚ್ಯುತಿ ಉಲ್ಲಂಘನೆಯಾಗಿದೆ ಎಂದು ತಿರುಗೇಟು ನೀಡಿದರು.
ಚನ್ನಬಸಪ್ಪ ಅವರು ಮಾಜಿ ಶಾಸಕ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಸ್ಪರ್ಧೆಗೆ ಬಿದ್ದಂತೆ ಕಾಣುತ್ತಿದೆ. ಹಾಗಾಗಿ ಅವಸರದಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಬೆಂಬಲಿಗರಿಗೆ ಮನೆಗಳನ್ನು ಕೊಡಿಸಲು ಆಯುಕ್ತರ ಮೇಲೆಒತ್ತಡ ಹಾಕಿ ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಏಕಾಏಕಿ ಮನೆಗಳ ಹಂಚಿಕೆ ಸಭೆ ಏರ್ಪಡಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಇವರಿಗೆ ಲೆಕ್ಕಕ್ಕೇ ಇಲ್ಲದಂತಾಗಿದೆ. ಆದ್ದರಿಂದ ಜಿಲ್ಲಾ ಕಾಂಗ್ರೆಸ್ ಆಯುಕ್ತರಿಗೆ ಈ ಸಭೆ ನಡೆಸುತ್ತಿರುವುದು ಸರಿಯಲ್ಲ ಎಂದು ಹೇಳಿತ್ತು ಎಂದರು.
ಈಗ ಮಧು ಬಂಗಾರಪ್ಪನವರು ಈ ಸಭೆಯನ್ನು ರದ್ದು ಮಾಡಿದ್ದಾರೆ ಎಂದು ಶಾಸಕ ಚನ್ನಬಸಪ್ಪ ಹೇಳುತ್ತಿರುವುದು ಸರಿಯಲ್ಲ. ತಮ್ಮವರನ್ನು ಎತ್ತಿ ಕಟ್ಟಿ ಪ್ರತಿಭಟನೆಗೆ ಹೊರಟಿದ್ದು ಶಾಸಕರ ಷಡ್ಯಂತ್ರವಾಗಿದೆ ಎಂದರು.
ಅಲ್ಲದೇ, ಈ ಆಶ್ರಯ ಬಡಾವಣೆಗಳಲ್ಲಿ ಅನರ್ಹರಿಗೆ ಮನೆ ಹಂಚಲಾಗಿದೆ. ಬಹುದೊಡ್ಡ ಅಕ್ರಮ ನಡೆದಿದೆ. ನೈಜ ಫಲಾನುಭವಿಗಳನ್ನು ಬಿಟ್ಟು ಬಿಜೆಪಿ ಹಾಗೂ ಆರ್.ಎಸ್.ಎಸ್.ನಲ್ಲಿ ಸಕ್ರಿಯವಾಗಿರುವವರಿಗೆ ಮನೆ ಹಂಚಲಾಗಿದೆ. ಮೊದಲು ಇದು ತನಿಖೆಯಾಗಬೇಕು.ಸರ್ಕಾರ ಕೂಡಲೇ ತನಿಖೆ ನಡೆಸಿ ಅನರ್ಹರಿಗೆ ಹಂಚಿಕೆಯಾಗಿರುವ ಮನೆಗಳನ್ನು ರದ್ದುಪಡಿಸಿ ನಂತರ ಹಂಚಿಕೆ ಮಾಡಲಿ ಎಂದರು.
ಈ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಬೇಕು. ರಸ್ತೆ ಸೌಲಭ್ಯ, ನೀರಿನ ವ್ಯವಸ್ಥೆ ಇಲ್ಲ. ತರಾತುರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಇದು ಸರಿಯಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವಸತಿ ಯೋಜನೆ ರೂಪಿಸಿದ್ದರೂ ಕೂಡ ಮೂಲಭೂತ ಸೌಕರ್ಯಗಳನ್ನೇ ಕಲ್ಪಿಸಲಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವರು ಮೂಲಭೂತ ಸೌಲಭ್ಯಕ್ಕಾಗಿ ವಸತಿ ಸಚಿವರ ಬಳಿ ಮಾತನಾಡಿದ್ದಾರೆ. ಸೌಲಭ್ಯದ ನಂತರ ಮನೆ ವಿತರಣೆ ಮಾಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್. ರವಿಕುಮಾರ್, ಚಂದ್ರಭೂಪಾಲ್, ರಮೇಶ್ ಹೆಗ್ಡೆ, ಜಿ.ಡಿ. ಮಂಜುನಾಥ್, ನಾಗರಾಜ್ ಕಂಕಾರಿ, ಶಿವಣ್ಣ, ಹೆಚ್.ಸಿ. ಯೋಗೀಶ್, ಎಸ್.ಟಿ. ಹಾಲಪ್ಪ, ಯು. ಶಿವಾನಂದ್, ಮಂಜುನಾಥ್ ಬಾಬು, ಕಲೀಂ ಪಾಷಾ, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಶಿವಕುಮಾರ್ ಮುಂತಾದವರಿದ್ದರು.