ಸಾಗರ, ನ.೧೦- ಸತತ ನೃತ್ಯಾಭ್ಯಾಸದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಅಲ್ಲದೇ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಲು ಅವಕಾಶ ಒದಗಿಸಿಕೊಟ್ಟಂತಾಗುತ್ತದೆ ಎಂದು ಉದ್ಯಮಿ ಹೆಗ್ಗೋಡಿನ ವಿಠ್ಠಲ ಪೈ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಸ್ಟೈಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ೧೬ ನೇ ವರ್ಷದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ ಅವರು, ನೃತ್ಯ ಅಭ್ಯಾಸದಿಂದ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಇದು ಸಹಕಾರಿ ಎಂದರು.
ಸ್ಟೈಲ್ ಡ್ಯಾನ್ಸ ಅಕಾಡೆಮಿಯ ಡ್ಯಾನ್ಸ್ ಮಾಸ್ಟರ್ ಸೂರಜ್ ಅವರು ಮಕ್ಕಳಿಗೆ, ಮಹಿಳೆಯರಿಗೆ ಪುರುಷರಿಗೆ ವಿವಿಧ ರೀತಿಯ ನೃತ್ಯವನ್ನು ಕಲಿಸುತ್ತಿದ್ದಾರೆ. ಮಕ್ಕಳು ಇಂಥ ನೃತ್ಯ ಅಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಸದೃಢತೆಯನ್ನು ಕಾಪಿಟ್ಟುಕೊಳ್ಳಬಹುದು. ಪೋಷಕರು ಇಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಮಾತನಾಡಿ, ಸ್ಟೈಲ್ ಡ್ಯಾನ್ಸ್ ಅಕಾಡೆಮಿಯ ಸೂರಜ್ ಅವರು ಕಳೆದ ೧೬ ವರ್ಷಗಳಿಂದ ನೃತ್ಯಾ ತರಬೇತಿ ನೀಡಿ ನೃತ್ಯ ಪ್ರಕಾರವನ್ನು ಪೋಷಿಸುತ್ತಿರುವುದು ಶ್ಲಾಘನೀಯ. ಇಂಥ ಕಲೆ ಸಂಸ್ಕೃತಿ ಉಳಿಸಲು ಬೆಳೆಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಝೀ ಕನ್ನಡ ವಾಹಿನಿಯ ಪವನ್, ಪ್ರವೀಣ್ ಕೆ.ಎಂ., ಮಂಜುನಾಥ ಬಾಳೂರು, ಶಂಕ್ರು ಸಂದೀಪ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಪಘಾತರಹಿತವಾಗಿ ಬಸ್ ಚಾಲನೆ ಮಾಡಿದ ನಿವೃತ್ತ ಬಸ್ ಚಾಲಕ ರಾಜು ನಾಯರ್ ಅವರನ್ನು ಸನ್ಮಾನಿಸಲಾಯಿತು.
ಸ್ಟೈಲ್ ಡ್ಯಾನ್ಸ್ ಅಕಾಡೆಮಿ ಸಂಸ್ಥಾಪಕ ಡ್ಯಾನ್ಸ್ ಸೂರಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾ ಪೋಷಕರು, ದಾನಿಗಳ ಸಹಕಾರದಿಂದ ಇಂಥ ದೊಡ್ಡ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ. ನೃತ್ಯ ತರಬೇತಿಯನ್ನು ೨೦೦೯ ರಲ್ಲಿ ಆರಂಭಿಸಲಾಯಿತು. ಮೊದಲು ೬ ಮಕ್ಕಳಿಂದ ಆರಂಭಗೊಂಡ ಈ ಕೇಂದ್ರದಲ್ಲಿ ಈಗ ೧೦೦ ಮಕ್ಕಳು ನೃತ್ಯ ಕಲಿಯುತ್ತಿದ್ದಾರೆ. ಈ ಹಿಂದೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಸುತ್ತಿದ್ದು, ಮಕ್ಕಳಲ್ಲಿ ನೃತ್ಯಾಸಕ್ತಿ ಹೆಚ್ಚಿಸಲು ಕಳೆದ ಮೂರು ವರ್ಷಗಳಿಂದ ನರ್ತನ ಹೆಸರಲ್ಲಿ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಸಲಾಗುತ್ತಿದೆ ಎಂದರು.
ನಮ್ಮ ಕೇಂದ್ರದಲ್ಲಿ ನೃತ್ಯ ತರಬೇತಿ ನೀಡುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳನ್ನೂ ನಡೆಸಲಾಗುತ್ತಿದೆ. ರಕ್ತದಾನ ಶಿಬಿರ, ಬಡವರಿಗೆ ಉಚಿತ ನೃತ್ಯ ತರಬೇತಿ, ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಲಾಗುತ್ತಿದೆ. ದೇಶೀಯ ನೃತ್ಯ ಪ್ರಕಾರಗಳ ತರಬೇತಿಯನ್ನೂ ನೀಡಲಾಗುತ್ತಿದೆ ಎಂದರು.
ವ್ಯಾಯಾಮ ತರಬೇತಿ ನೀಡಲಾಗುತ್ತಿದೆ. ನಮ್ಮ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದ್ದು, ಬಡವರಿಗೆ ಉಚಿತ ನೃತ್ಯ ತರಬೇತಿ, ಶಾಲೆಗಳಲ್ಲಿ ನೃತ್ಯ ಕಲಿಕೆ, ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ್ದೇವೆ. ನೃತ್ಯ ಕಲಿಯಲು ಮಕ್ಕಳು ಆಸಕ್ತಿಯಿಂದ ಬರುತ್ತಿದ್ದಾರೆ. ಪ್ರಸ್ತುತ ೩೦ ಮಹಿಳೆಯರು, ೧೫ ಪುರುಷರು ಹಾಗೂ ೧೦೦ ಮಕ್ಕಳು ನೃತ್ಯ ಕಲಿಯುತ್ತಿದ್ದಾರೆ ಎಂದರು.
ಕಲಾ ಪೋಷಕರಾದ ಗುರುಮೂರ್ತಿ, ಶ್ರೀನಿವಾಸ್ ಎಸ್.ಆರ್., ಸಿಬಿನ್ ಸೋಮನ್, ರೇಖಾ, ದಿನಕರ, ಅನಿಲಕುಮಾರ್ ಮತ್ತಿತರರು ಹಾಜರಿದ್ದರು.
ನಂದೀಶ್ ಸ್ವಾಗತಿಸಿ, ನಿರೂಪಿಸಿದರು. ಲೋಕೇಶ್ ವಂದಿಸಿದರು.
ನಂತರ ಸ್ಟೈಲ್ ಡ್ಯಾನ್ಸ್ ಅಕಾಡೆಮಿ ತರಬೇತಿ ಪಡೆದ ಮಕ್ಕಳು, ಮಹಿಳೆಯರು, ಪುರುಷರಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ಪ್ರಥಮ ಬಾರಿಗೆ ನಡೆಸಿದ ಆಕರ್ಷಕ ರೈನ್ ಡ್ಯಾನ್ಸ್ ನೃತ್ಯ ಪ್ರೇಕ್ಷಕರ ಮನ ಸೆಳೆಯಿತು.