ಸಾಗರ : ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಶನ್ ಬೆಳೆ ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೊರಗಿಟ್ಟಿರುವ ಕ್ರಮ ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ದೂರಿದ್ದಾರೆ.


ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಜಮೀನಿನಲ್ಲಿ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು ಗುತ್ತಿಗೆಗೆ ನೀಡಲು ಸಂಬಂಧಪಟ್ಟ ಬೆಳೆಗಾರರಿಂದ ಮಾ. ೧೨ರಂದು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಶಿವಮೊಗ್ಗ ಜಿಲ್ಲೆಯ ರೈತರಿಗೆ ಇದರಿಂದ ಮೋಸವಾಗಿದೆ ಎಂದರು.


ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ, ಕಾಳುಮೆಣಸು, ಏಲಕ್ಕಿ, ಕೋಕೋ, ಕಾಫಿ ಸೇರಿದಂತೆ ಬೇರೆಬೇರೆ ಪ್ಲಾಂಟೇಶನ್ ಬೆಳೆ ತೆಗೆಯುವ ದೊಡ್ಡ ಪ್ರಮಾಣದಲ್ಲಿ ರೈತರಿದ್ದಾರೆ. ಸರ್ಕಾರಿ ಭೂಮಿಯಲ್ಲಿ ಪ್ಲಾಂಟೇಶನ್ ಬೆಳೆ ತೆಗೆಯುವ ಜಿಲ್ಲೆಗಳ ಪಟ್ಟಿ ಮಾಡುವಾಗ ಶಿವಮೊಗ್ಗ ಜಿಲ್ಲೆಯನ್ನು ಕೈಬಿಟ್ಟು ಕೊಡಗು, ಹಾಸನ, ಚಿಕ್ಕಮಗಳೂರು ಇನ್ನಿತರೆ ಜಿಲ್ಲೆ ಸೇರಿಸಿದೆ. ನಮ್ಮ ಜಿಲ್ಲೆ ಕೈಬಿಟ್ಟು ಹೋಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮೌನವಾಗಿದ್ದಾರೆ. ಅತಿಹೆಚ್ಚು ಮುಳುಗಡೆ ಸಂತ್ರಸ್ತರನ್ನು ಹೊಂದಿರುವ ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆ ಮುಂಚೂಣಿಯಲ್ಲಿದ್ದು, ಉಪಯುಕ್ತ ಯೋಜನೆಯೊಂದು ಚುನಾಯಿತ ಪ್ರತಿನಿಧಿಗಳ ನಿರ್ಲಕ್ವ್ಯದಿಂದ ರೈತರ ಕೈತಪ್ಪಿ ಹೋಗಿದೆ. ತಕ್ಷಣ ಶಿವಮೊಗ್ಗ ಜಿಲ್ಲೆಯಲ್ಲಿ ಇದರ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.


ಈ ಬಾರಿ ಅತಿವೃಷ್ಟಿಯಿಂದ ಅತಿಹೆಚ್ಚು ಹಾನಿಯಾಗಿದ್ದು ಜಿಲ್ಲೆಯಲ್ಲಿ ಸಾವಿರಾರು ಮನೆ ಮಳೆಯಿಂದ ನೆಲಸಮವಾಗಿದೆ. ರಾಜ್ಯ ಸರ್ಕಾರ ಈತನಕ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಹಿಂದಿನ ಸರ್ಕಾರ ಮನೆ ಬಿದ್ದವರಿಗೆ ೫ ಲಕ್ಷ ರೂ. ಪರಿಹಾರ ಕೊಟ್ಟಿದ್ದರೇ, ಈಗಿನ ಸರ್ಕಾರ ೧.೨೦ ಲಕ್ಷ ರೂ. ಅತಿಕಡಿಮೆ ಪರಿಹಾರ ನೀಡುತ್ತಿದ್ದು, ಸರ್ಕಾರ ದಿವಾಳಿಯಾಗಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ೫೦೦ ಕೋಟಿ ಹಣ ಇದೆ ಎಂದು ಸರ್ಕಾರ ಹೇಳುತ್ತಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದರೆ ರೈತರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಅತಿವೃಷ್ಟಿಯಿಂದ ಶೇ. ೭೦ರಷ್ಟು ಅಡಿಕೆ ಫಸಲು ಹಾಳಾಗಿದೆ. ಶಾಸಕರು ಬೆಳೆಹಾನಿ ಪ್ರದೇಶಕ್ಕೆ ಹೋಗಿ ಫೋಟೋ ಹೊಡೆಸಿ ಪ್ರಚಾರ ಪಡೆದಿದ್ದಾರೆ. ಆದರೆ ಬೆಳೆಗಾರರಿಗೆ ನಯಾಪೈಸೆ ಪರಿಹಾರ ಕೊಡಿಸಿಲ್ಲ. ರಾಜ್ಯ ಸರ್ಕಾರ ರೈತರ ಮತ್ತು ಬಡವರವಿರೋಧಿ ಸರ್ಕಾರ ಎಂದು ಆರೋಪಿಸಿದರು.


ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಡವರ ಮತ್ತು ರೈತರ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಈತನಕ ನೆರೆ ಪರಿಹಾರವನ್ನು ಕೊಟ್ಟಿಲ್ಲ. ರೈತರ ಜಮೀನನ್ನು ವಕ್ಫ್ ಆಸ್ತಿಯಾಗಿ ಸೇರಿಸಿದ್ದೆ ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದರೆ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ನಗರವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸ ನಿಂತು ಹೋಗಿದೆ. ನಗರೋತ್ಥಾನ ಕಾಮಗಾರಿ ಗುತ್ತಿಗೆ ಹಿಡಿದ ಗುತ್ತಿಗೆದಾರರು ಇವರ ಕಾಟ ತಡೆಯಲಾರದೆ ಓಡಿ ಹೋಗಿದ್ದಾರೆ ಎಂದರು.
ಗೋಷ್ಟಿಯಲ್ಲಿ ರವೀಂದ್ರ ಬಿ.ಟಿ., ರಮೇಶ್ ಎಚ್.ಎಸ್., ಅರುಣ ಕುಗ್ವೆ, ಹರೀಶ್ ಮೂಡಳ್ಳಿ, ಜಿ.ಕೆ.ಭೈರಪ್ಪ, ನಾಗರಾಜ ಮಜ್ಜಿಗೆರೆ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!