ಸಾಗರ : ನಮ್ಮ ಮಠ, ಮಂದಿರ ಸಂಸ್ಕಾರದ ಮೇಲೆ ದಬ್ಬಾಳಿಕೆ ನಡೆಯುತ್ತಿರುವ ಕೆಲವು ಘಟನೆಗಳು ನಡೆಯುತ್ತಿದೆ. ನಮ್ಮ ಸಂಸ್ಕಾರ ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕು. ಅನೇಕ ವೈರುದ್ಯಗಳ ಚರ್ಚೆ ನಡುವೆಯೂ ಸಂಸ್ಕೃತಿ ಉಳಿಸಿಕೊಳ್ಳಲು ನಮ್ಮ ಪಾತ್ರವೇನು ಎನ್ನುವುದರ ಕುರಿತು ಚಿಂತನೆ ಅಗತ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಲ್ಲಿನ ಶಿವಪ್ಪನಾಯಕ ನಗರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ನಿರ್ಮಿಸಿರುವ ದೈವಜ್ಞ ಬ್ರಾಹ್ಮಣ ಸಭಾಭವನ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ರಾಷ್ಟ್ರೀಯತೆ ವಿಚಾರ ಬಂದಾಗ ರಾಷ್ಟ್ರ ಮೊದಲು ಎಂದು ಧ್ವನಿಎತ್ತುವ ಕೆಲವೇಕೆಲವು ಸಮಾಜದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಸಹ ಒಂದಾಗಿದೆ. ನಮ್ಮ ಧರ್ಮ ನಮ್ಮ ಸಂಸ್ಕಾರ ಉಳಿಸಿಕೊಳ್ಳಲು ಶ್ರೀಗಳ ನೇತೃತ್ವದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ತನ್ನದೆ ಕೊಡುಗೆ ಸಮಾಜಕ್ಕೆ ನೀಡುತ್ತಿದೆ ಎಂದರು.
ದೈವಜ್ಞ ಬ್ರಾಹ್ಮಣ ಸಭಾಭವನವೂ ಸೇರಿದಂತೆ ಎಲ್ಲ ಜಾತಿಮತಪಂಥವನ್ನು ಮೀರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸುಮಾರು ೨೫೦ ಕೋಟಿ ರೂ.ಗೂ ಹೆಚ್ಚು ಹಣವನ್ನು ತಂದು ಸರ್ವಜನಾಂಗದ ಸಮುದಾಯ ಭವನ ನಿರ್ಮಿಸಲು ಪ್ರಯತ್ನ ಮಾಡಿದ್ದೇವೆ. ಸಾಗರವನ್ನು ಪ್ರವಾಸಿತಾಣವಾಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ತುಮರಿ ಸೇತುವೆ, ರಾಷ್ಟ್ರೀಯ ಹೆದ್ದಾರಿ, ಜೋಗ ಜಲಪಾತ ಅಭಿವೃದ್ದಿಯಾಗುತ್ತಿದೆ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕೇಬಲ್ ಕಾರು ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ಅತ್ಯಂತ ಸುಸಜ್ಜಿತವಾದ ಸಭಾಭವನವನ್ನು ನಿರ್ಮಿಸಿರುವುದು ಅನುಕರಣೀಯ ಸಂಗತಿ. ನಗರದ ಪ್ರಮುಖ ಭಾಗದಲ್ಲಿ ಸಭಾಭವನ ಇರುವುದರಿಂದ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ. ಹಿರಿಯರು ಇಂತಹ ಜಾಗವನ್ನು ಉಳಿಸಿ ಮುಂದಿನ ಪೀಳಿಗೆಗೆ ಸಮುದಾಯ ಭವನ ನಿರ್ಮಿಸಿ ನೀಡಿದ್ದಾರೆ. ಇದನ್ನು ರಕ್ಷಣೆ ಮಾಡಿಕೊಂಡು ಹೋಗುವ ಹೊಣೆಗಾರಿಕೆ ಸಮುದಾಯದ ಕಿರಿಯರ ಮೇಲೆ ಇದೆ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಮೋಹನ್ ಶೇಟ್ ಎಂ.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ರವಿ ಎಸ್. ಗಾಂವಕರ್, ಮಂಜುನಾಥ್, ಆರ್.ಎಸ್. ರಾಯ್ಕರ್, ಅರುಣ ಕುಮಾರ್ ಎಂ.ಎಸ್., ನಗರಸಭೆ ಸದಸ್ಯರಾದ ಮಧುಮಾಲತಿ, ಅರವಿಂದ ರಾಯ್ಕರ್ ಇನ್ನಿತರರು ಹಾಜರಿದ್ದರು. ಸೂರ್ಯಕಾಂತ್ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ್ ಶೇಟ್ ನಿರೂಪಿಸಿದರು.