ಶಿವಮೊಗ್ಗ, ನವೆಂಬರ್ 04
ಜಿಲ್ಲೆಯಲ್ಲಿ ಸಂಕಷ್ಟಕ್ಕೊಳಪಟ್ಟ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಉಚಿತ ವಾಹನ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ನ.01 ರಂದು ಸದರಿ ವಾಹನಕ್ಕೆ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿದರು.
ಶಾಸಕರು, ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ತ್ತ ಮಕ್ಕಳ ಅಭಿವೃದ್ದಿ ಇಲಾಖೆಗಳ ಸಂಕೀರ್ಣ ಆವರಣ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇಲ್ಲಿ ನ.01 ರಂದು ವಾಹನಕ್ಕೆ ಚಾಲನೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಜಿ.ಪಂ ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ಕುಟುಂಬ, ಸಮುದಾಯ ಕೆಲಸದ ಸ್ಥಳಗಳು ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಸಕಾಲಿಕ ನೆರವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯಡಿ ದೇಶಾದ್ಯಂತ 24/7 ರಂತೆ ಸಖಿ ಒನ್ ಸ್ಟಾಪ್ ಸೆಂಟರ್‌ಗಳನ್ನು ದೇಶದ ಪ್ರತಿ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.
ಸಖಿ-ಒನ್ ಸ್ಟಾಪ್ ಸೆಂಟರ್ ಕೇಂದ್ರವನ್ನು ಜಿಲ್ಲೆಯಲ್ಲಿ ಶಿವಮೊಗ್ಗ ಮತ್ತು ಸಾಗರ ತಾಲ್ಲೂಕಿನಲ್ಲಿ ಪ್ರಾರಂಭಿಸಲಾಗಿದೆ. ಶಿವಮೊಗ್ಗದಲ್ಲಿ ದಿ: 06-11-2020 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಂಕೀರ್ಣ ಆವರಣ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಇಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾಗರ ತಾಲ್ಲೂಕಿನಲ್ಲಿ ದಿ: 28-05-2024 ರಿಂದ ಕಾರ್ಯಾರಂಭಗೊAಡು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅವರಣ, ಲೋಕೋಪಯೋಗಿ ಕಟ್ಟಡ, ಬಿ.ಹೆಚ್.ರಸ್ತೆ, ಸಾಗರ ಇಲ್ಲಿ ಕೆಲಸ ನಿರ್ವಹಿಸುತ್ತಿದೆ.
ಸಖಿ ಕೇಂದ್ರದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ 5 ಉಚಿತ ಸೇವೆಗಳಾದ ಆಪ್ತ ಸಮಾಲೋಚನೆ, ಪೊಲೀಸ್ ನೆರವು, ಕಾನೂನು ನೆರವು, ವೈದ್ಯಕೀಯ ನೆರವು ಮತ್ತು ತಾತ್ಕಾಲಿಕ ಆಶ್ರಯವನ್ನು 24/7 ಒದಗಿಸಲಾಗುತ್ತಿದೆ.
ಶಿವಮೊಗ್ಗ ಸಖಿ ಕೇಂದ್ರದಲ್ಲಿ ಒಟ್ಟು 2095 ಪ್ರಕರಣಗಳು ದಾಖಲಾಗಿದ್ದು, 1846 ಪ್ರಕರಣಗಳಿಗೆ ಕೇಂದ್ರದ ಸೇವೆಗಳನ್ನು ಒದಗಿಸಿ ಮುಕ್ತಾಯಗೊಳಿಸಲಾಗಿರುತ್ತದೆ.
ಜಿಲ್ಲೆಯಲ್ಲಿ ಸಂಕಷ್ಟಕ್ಕೊಳಪಟ್ಟ ಮಹಿಳೆಯರ ರಕ್ಷಣೆಗಾಗಿ ಉಚಿತ ವಾಹನ ಸೌಲಭ್ಯ ಒದಗಿಸಲಾಗಿದ್ದು ನೊಂದ ಮಹಿಳೆಯರು ಸಖಿ ಕೇಂದ್ರಕ್ಕಾಗಲಿ ಅಥವಾ ಮಹಿಳಾ ಸಹಾಯವಾಣಿ ಸಂ: 181 ಕ್ಕೆ ಕರೆ ಮಾಡಿ ಪ್ರಯೋಜನ ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಅಪರಿಚತ ವ್ಯಕ್ತಿ ಸಾವುಶಿವಮೊಗ್ಗ, ನವೆಂಬರ್ 04
ನಗರದ ಸಾವರ್ಕರ್ ರಸ್ತೆ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ.
ಮೃತನು ಸುಮಾರು 5 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, 2 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕೂದಲು, 3 ಇಂಚು ಉದ್ದದ ಕಪ್ಪು ಬಿಳಿ ಬಣ್ಣದ ಕುರುಚಲು ಗಡ್ಡ ಇರುತ್ತದೆ. ಮೈಮೇಲೆ ಬೂದು ಬಣ್ಣದ ಟೀ-ಶರ್ಟ್ ಮತ್ತು ಸಿಮೆಂಟ್ ಬಣ್ಣದ ಫಾರ್ಮಲ್ ಪ್ಯಾಂಟ್ ಇರುತ್ತದೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.