ಶಿವಮೊಗ್ಗ: ಎನ್.ಜೆ. ರಾಜಶೇಖರ್(ಸುಭಾಷ್) ಅವರು ಪಕ್ಷಾತೀತ ಅಪರೂಪದ ಮಾನವೀಯತೆಯುಳ್ಳ ವ್ಯಕ್ತಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದ್ದಾರೆ.

ಅವರು ಇಂದು ಕುವೆಂಪು ರಸ್ತೆಯಲ್ಲಿ ನಿನ್ನೆ ನಿಧನರಾದ ವೀರಶೈವ ಸಮಾಜದ ಮುಖಂಡರು, ಶಿವಮೊಗ್ಗ ನಗರಸಭೆ ಮಾಜಿ ಅಧ್ಯಕ್ಷರಾದ ಎನ್.ಜೆ. ರಾಜಶೇಖರ್ ಅವರ ಮನೆ ಮುಂಭಾಗ ಅವರ ಅಭಿಮಾನಿಗಳು ಮತತ್ಉ ಬಿಜೆಪಿ ಪಕ್ಷದ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪಕ್ಷ ಯಾವುದೇ ಇದ್ದರೂ ಕೂಡ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಶುಭ ಹಾರೈಸಿವು ಮನಸ್ಸು ಅವರದ್ದಾಗಿತ್ತು. ಯಾವುದೇ ಸಮಸ್ಯೆ ಇರಲಿ ಸುಭಾಷ್ ಅಣ್ಣ ಹೇಳಿದರೆ ಮುಗಿಯಿತು ಎನ್ನುವಷ್ಟರ ಮಟ್ಟಿಗೆ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ನಾನು ವಿರೋಧ ಪಕ್ಷದಲ್ಲಿದ್ದರೂ ಕೂಡ ನನ್ನ ಗೆಲುವಿಗೆ ಹಾರೈಸಿದ್ದರು. ಅಂತಹ ಅಪರೂಪದ ರಾಜಕಾರಣಿ, ಸಂಘಟಕ, ಹಾಗೂ ಸಮಾಜದ ಬಗ್ಗೆ ಅತ್ಯಂತ ಕಳಕಳಿಯುಳ್ಳ ವ್ಯಕ್ತಿ ಎಂದರು.

ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಮಾತನಾಡಿ, ನಗರದ ಹಿತದೃಷ್ಟಿಯಿಂದ ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ಸಹ ಅವರು ಹೇಳಿದ ತೀರ್ಮಾನವೇ ಅಂತಿಮವಾಗಿತ್ತು. ಮತ್ತು ಅದು ನಗರದ ಜನತೆಯ ಪರವಾಗಿ ಇರುತ್ತಿತ್ತು. ಯಾವತ್ತೂ ನಾವು ಪಕ್ಷಬೇಧ ಮರೆತು ಒಟ್ಟಾಗಿ ಕೆಲಸ ಮಾಡಿದ್ದು ಸ್ವಪಕ್ಷೀಯರೇ ಕೆಲವೊಮ್ಮೆ ನಮ್ಮನ್ನು ಅಪಹಾಸ್ಯ ಮಾಡುವ ಮಟ್ಟಿಗೆ ನಮ್ಮ ಸ್ನೇಹವಿತ್ತು ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಾಲೇಜು ದಿನಗಳಿಂದ ನಾವೆಲ್ಲರೂ ಸಹಪಾಠಿಗಳು ನಮ್ಮನ್ನು ಚಡ್ಡಿಗಳು ಎಂದು ಅಪಹಾಸ್ಯ ಮಾಡುತ್ತಿದ್ದ ಅವರು ಕೊನೆಗೆ ನಮಗಿಂತ ಹೆಚ್ಚಾಗಿ ಪಕ್ಷ ಮತ್ತು ಸಂಘಟನೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ತಮಾಷೆಯ ವ್ಯಕ್ತಿತ್ವ. ಯಾವಾಗ ಸಿಕ್ಕಿದರೂ ತಮಾಷೆಯಿಂದ ಮಾತನಾಡಿಸಿ ಹೇಳಬೇಕಾದ್ದನ್ನು ನೇರವಾಗಿ ಹೇಳುವ ಸ್ವಭಾವ ಅಪರೂಪದ ಸಂಘಟಕ ಎಂದರು.

ಬಿಜೆಪಿ ಮುಖಂಡ ಗಿರೀಶ್ ಪಟೇಲ್ ಮಾತನಾಡಿ, ಸ್ನೇಹಕ್ಕೆ ಇನ್ನೊಂದು ಹೆಸರು ಸುಭಾಷ್. ಸಹೃದಯ ವ್ಯಕ್ತಿಯಾಗಿದ್ದರು. ಅವರ ವ್ಯಕ್ತಿತ್ವ ನಮ್ಮ ಜೊತೆ ಸದಾ ಇರುತ್ತದೆ, ನಮಗೊಬ್ಬರು ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ನಾನು ಬಿಜೆಪಿ ಬಿಟ್ಟಾಗಲು ಸಹ ನಮ್ಮ ಸ್ನೇಹಕ್ಕೆ ಚ್ಯುತಿ ಬಂದಿಲ್ಲ. ನೇರವಾಗಿ ಮಾತನಾಡುವ ವ್ಯಕ್ತಿತ್ವ ಅವರದ್ದಾಗಿತ್ತು. ಇನ್ನೊಬ್ಬರಿಗೆ ಕೇಡು ಬಯಸದ ವ್ಯಕ್ತಿ ಅವರು ಎಂದರು.

ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿ, ಬಹಳ ಹಿಂದಿನಿಂದಲೂ ನಮ್ಮದು ವ್ಯವಹಾರಿಕ ಸಂಬಂಧ. ಯಾವತ್ತೂ ಅವರು ಬೇಸರ ವ್ಯಕ್ತಪಡಿಸಿದ್ದನ್ನು ನಾನು ನೋಡೇ ಇಲ್ಲ. ಸಾವು ಹತ್ತಿರವಾಗಿದೆ ಎಂದು ಗೊತ್ತಿದ್ದರೂ ಸಹ ಮುಖದಲ್ಲಿ ಕಳೆ ಇದೆಯಲ್ಲ ಎಂದಾಗ ಸಾಯುತ್ತೇನೆ ಎಂಬ ಖುಷಿ ಎಂದು ತಮಾಷೆ ಮಾಡಿದ್ದರು ಎಂದು ಭಾವುಕರಾದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮೇಲ್ಪಂಕ್ತಿಯ ಸಂಘಟಕ ಸುಭಾಷ್ ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬಡವರ ಬಗ್ಗೆ ಕಾಳಜಿಯುಳ್ಳ ವ್ಯಕ್ತಿ ಅವರಾಗಿದ್ದರು. ಅಜಾತಶತ್ರು ಅವರು ಎಂದರು.

ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ನನ್ನ ತಂದೆಯ ಸ್ವಂತ ಅಕ್ಕನ ಮಗ ಅವರು. ಜಂಬಣ್ಣ ಕುಟುಂಬ ಶಿವಮೊಗ್ಗಕ್ಕೆ ಹೆಸರುವಾಸಿಯಾಗಿದ್ದು, ಸುಭಾಷಣ್ಣನ ನಿಧನದಿಂದ ಜಂಬಣ್ಣ ಕುಟುಂಬದ ಸಾರ್ವಜನಿಕ ಸಂಪರ್ಕಕೊಂಡಿ ತಪ್ಪಿದೆ. ಅವರ ವ್ಯಕ್ತಿತ್ವ ಮಾನವೀಯ ಸಂಬಂಧ ಬೆಸೆಯುವಂತಹುದು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಮಾತನಾಡಿ, 4 ಬಾರಿ ಒಂದೇ ವಾರ್ಡ್ ನಿಂದ ಗೆದ್ದ ಏಕೈಕ ವ್ಯಕ್ತಿ. ಪಾಲಿಕೆ ಅಧಿಕಾರಿಗಳು ಜನಪರ ಕಾರ್ಯಗಳಿಗೆ ಕಾನೂನಿನ ಅಡ್ಡಿಪಡಿಸಿದರೆ ಕಾನೂನನ್ನೇ ಬದಲಾಯಿಸಿ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಸೂಚನೆ ನೀಡುತ್ತಿದ್ದರು. ಅದನ್ನು ಪಾಲಿಕೆ ಸಭೆಯಲ್ಲಿ ತಂದು ಜನರಿಗೆ ಅನುಕೂಲವಾಗುವ ಹಾಗೆ ನೋಡಿಕೊಳ್ಳುತ್ತಿದ್ದರು. ನಮ್ಮ ಕುಟುಂಬದ ಬಗ್ಗೆ ಅತ್ಯಂತ ಪ್ರೀತಿಯುಳ್ಳವರಾಗಿದ್ದು ನನಗೆ ಅನೇಕ ಸಂದರ್ಭದಲ್ಲಿ ಬುದ್ದಿ ಹೇಳಿ ತಿದ್ದಿ ತೀಡಿದ್ದಾರೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನಿಜವಾಗಲೂ ಜಾತ್ಯತೀತ ಕಾರ್ಯಕರ್ತರಾಗಿದ್ದರು. ಅವರ ಅಂತಿಮ ಶ್ರದ್ಧಾಂಜಲಿ ಸಭೆ ನೋಡಿದಾಗ ಸುಭಾಷಣ್ಣ ಗಳಿಸಿದ ಪ್ರೀತಿಯ ಸಾಗರ ಎಷ್ಟು ಆಳದ್ದು ಎಂದು ಗೊತ್ತಾಯಿತು. ನಾನು ಜನಪ್ರತಿನಿಧಿಯಾಗಿ ಕೋಟ್ಯಂತರ ರೂ. ಅನುದಾನವನ್ನು ಸಮಾಜಕ್ಕೆ ತರಲು ಮೊಟ್ಟ ಮೊದಲ ಪಾತ್ರ ಸುಭಾಷಣ್ಣ ಅವರದ್ದು. ಸಂಕಷ್ಟದ ಸಂದರ್ಭದಲ್ಲಿ ಸಮಾಜಕ್ಕೆ ಸುಭಾಷಣ್ಣ ನೆರವು ಬೇಕಾಗುತ್ತಿತ್ತು. ಸಂಬಂಧಗಳನ್ನು ಬೆಸೆಯುವುದರಲ್ಲಿ ಯಾವುದೇ ಸಣ್ಣಪುಟ್ಟ ವ್ಯಾಜ್ಯವಿರಲಿ, ಸುಭಾಷಣ್ಣ ಅದನ್ನು ಬಗೆಹರಿಸುತ್ತಿದ್ದರು. ಸಮಾಜಮುಖಿ ಕೆಲಸ ಮಾಡಿದ ಧೀಮಂತ ವ್ಯಕ್ತಿ ಅವರು. ನಮ್ಮಿಂದ ದೂರವಾದರೂ ಎಲ್ಲರ ಮನಸ್ಸಿನಲ್ಲಿ ಬದುಕಿರುತ್ತಾರೆ ಎಂದರು.

ಆರ್.ಎಸ್.ಎಸ್. ಸಹಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಈ ರೀತಿಯ ಶ್ರದ್ಧಾಂಜಲಿ ಕಾರ್ಯಕ್ರಮಗಳು ಅವರ ವ್ಯಕ್ತಿತ್ವವನ್ನು ನಾವು ರೂಢಿಸಿಕೊಳ್ಳಬೇಕು ಎನ್ನುವುದನ್ನು ಸೂಚಿಸುವುದಕ್ಕಾಗಿ ಮಾಡುತ್ತೇವೆ. ಶ್ರೇಷ್ಟ ಶರಣರ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಸುಭಾಷಣ್ಣ ಪಕ್ಷ ಮತ್ತು ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಬದುಕು ಪಾರದರ್ಶಕವಾಗಿತ್ತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಅವರ ನಿವಾಸಕ್ಕೆ ಇಂದು ಬೆಕ್ಕಿನ ಕಲ್ಮಠ, ತಾವರೆಕೆರೆ, ಯಡಿಯೂರು, ಬಿಳಕಿ ಮಠದ ಶ್ರೀಗಳು ಹಾಗೂ ಗಣ್ಯರಾದ ಕಡಿದಾಳ್ ಗೋಪಾಲ್, ಹೆಚ್.ಎಂ. ಚಂದ್ರಶೇಖರಪ್ಪ, ಅರುಣಾದೇವಿ, ತೇಜಸ್ವಿನಿ ರಾಘವೇಂದ್ರ, ಅಶ್ವತ್ಥನಾರಾಯಣಶೆಟ್ಟಿ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಮುಖಂಡರು, ಜನಪ್ರತಿನಿಧಿಗಳು ವಿವಿಧ ಸಮಾಜ, ಸಂಘಟನೆಗಳ ಮುಖಂಡರು ಅಪಾರ ಅಭಿಮಾನಿಗಳು, ಬೆಂಬಲಿಗರು ಶ್ರದ್ಧಾಂಜಲಿ ಸಲ್ಲಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!