ಶಿವಮೊಗ್ಗ: ಹಬ್ಬದ ಆಚರಣೆ, ಸಂಪ್ರದಾಯಗಳ ಪಾಲನೆಯು ಶಾಂತಿ, ನೆಮ್ಮದಿ ಒದಗಿಸುತ್ತದೆ. ಹಬ್ಬಗಳ ಆಚರಣೆಯು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಆನಂದಪುರ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ಚೌಕಿಮಠದ ಆವರಣದಲ್ಲಿ ದಸರಾ ಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನವರಾತ್ರಿ, ಆಯುಧಪೂಜೆ ಆಚರಣೆಯು ನಮ್ಮಲ್ಲಿರುವ ಶ್ರದ್ಧೆ ಭಕ್ತಿಯನ್ನು ಸೂಚಿಸುತ್ತವೆ.

ಗುರು ಹಿರಿಯರಲ್ಲಿ ಭಕ್ತಿ ಹೊಂದಿರಬೇಕು. ಮನುಷ್ಯನಿಗೆ ಹಣವೇ ಮುಖ್ಯವಲ್ಲ. ಸೇವೆ, ಸತ್ಕಾರ್ಯ ಜತೆಗೆ ಇಂತಹ ಪೂಜೆ ಪುನಸ್ಕಾರ ಸೇವೆಗಳು ಮನುಷ್ಯನ ಜೀವನವನ್ನು ಹಸನುಗೊಳಿಸುತ್ತವೆ ಎಂದು ತಿಳಿಸಿದರು.

ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಹಲವಾರು ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಮಕ್ಕಳಿಗೆ ಧಾರ್ಮಿಕ ಆಚರಣೆಗಳ ಮಹತ್ವ ತಿಳಿಸಬೇಕು. ಭಗವಂತನ ಅನುಗ್ರಹದಿಂದ ಎಲ್ಲರೂ ಸುಖ ಸಮೃದ್ಧಿಯಿಂದ ಬದುಕು ನಡೆಸುವಂತಾಗಲಿ ಎಂದು ಶುಭಹಾರೈಸಿದರು.

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಾಗರತ್ನಮ್ಮ ಚಂದ್ರಶೇಖರಯ್ಯ ಅವರಿಂದ ಭಕ್ತಿ ಸಂಗೀತ ಸೇವೆ ನೆರವೇರಿತು. ಕಾರ್ಯದರ್ಶಿ ಎಸ್.ಪಿ.ದಿನೇಶ್, ಕೋಶಾಧ್ಯಕ್ಷ ಕೆ.ಎಸ್.ತಾರನಾಥ್, ನಿರ್ದೇಶಕರಾದ ಅನಿತಾ ರವಿಶಂಕರ್, ಡಾ. ಸಿ.ರೇಣುಕಾರಾಧ್ಯ, ಎಸ್.ಎನ್.ಮಹಾಲಿಂಗಯ್ಯಶಾಸ್ತ್ರಿ, ಮೋಹನ್‌ಕುಮಾರ್, ಟಿ.ಬಿ.ಜಗದೀಶ್, ಎಂ.ಆರ್.ಪ್ರಕಾಶ್, ಸಿ.ಮಹೇಶಮೂರ್ತಿ, ಜೆ.ಆರ್.ರತ್ನಾ, ಜಿ.ವಿಜಯಕುಮಾರ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!