ಶಿವಮೊಗ್ಗ | ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿ ಸಾವು | ಬೀಡಿಗಾಗಿ ಕೈದಿಗಳಿಂದ ಕಲ್ಲು ತೂರಾಟ | ಎರಡು ದಿನ ಕುಡಿಯುವ ನೀರು ವ್ಯತ್ಯಯ
ಶಿವಮೊಗ್ಗ : ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಬೀಡಿ ಸೇದಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಕೈದಿಗಳು ಗಲಾಟೆ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ೨೧ ಕೈದಿಗಳ ವಿರುದ್ಧ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಆರ್.ಅನಿತಾ ಸೋಮವಾರ ಇಲ್ಲಿನ ತುಂಗಾ ನಗರ ಠಾಣೆಯಲ್ಲಿ ಎಫ್ಐಐಆರ್ ದಾಖಲಿಸಿದ್ದಾರೆ.
ಬೀಡಿ ಪೂರೈಸುವಂತೆ ಒತ್ತಾಯಿಸಿ ಕಾರಾಗೃಹದ ಕೈದಿಗಳು ಸೆ.೨ರಂದು ಪ್ರತಿಭಟನೆ ನಡೆಸಿದ್ದರು. ಅದು ಈಗ ಉಗ್ರ ರೂಪ ತಾಳಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಸಹ ಅರೋಪಿಗಳಲ್ಲಿ ಇಬ್ಬರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಆಗಿನಿಂದಲೂ ಇಲ್ಲಿ ಬಿಗಿ ಕ್ರಮ ಕೈಗೊಂಡಿದ್ದು, ಇದೂ ಕೂಡ ಕೈದಿಗಳ ಪ್ರತಿಭಟನೆಗೆ ಕಾರಣವಾಗಿತ್ತು.

ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿ ಸಾವು
ತೀರ್ಥಹಳ್ಳಿ: ತಾಲ್ಲೂಕಿನ ಬೇಗುವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬಿದರಹಳ್ಳಿ ಗ್ರಾಮದ ಇ.ಎಸ್. ಶ್ಯಾಮಣ್ಣ (೬೬) ಮೃತಪಟ್ಟವರು.
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಹೆಜ್ಜೆ ಹಾಕುವ ವೇಳೆ ತಲೆಸುತ್ತು ಬಂದು ಬಿದ್ದು ಅಸ್ಪಸ್ಥಗೊಂಡಿದ್ದರು. ಈ ವೇಳೆ ಸ್ಥಳದಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಡಿಜೆ ವಿಪರೀತ ಸದ್ದಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕುಡಿಯುವ ನೀರು ವ್ಯತ್ಯಯ
ಶಿವಮೊಗ್ಗ: ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಮಹಾನಗರಪಾಲಿಕೆಯಿಂದ ಹೊಸದಾಗಿ ಭೂಗತ ಕೇಬಲ್ ಚಾಲನೆಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಸೆ 18 ಮತ್ತು 19 ರಂದು ಎರಡು ದಿನ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯವಾಗುವುದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದೆ.
