ಶಿವಮೊಗ್ಗ,ಸೆ.೯: ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಸೆ.೧೨ರಂದು ಬೆಳಿಗ್ಗೆ

೧೧ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೃಹತ್ ತಮಟೆ ಚಳುವಳಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ಈಗ ತೆರೆ ಎಳೆದಿದೆ. ಸುಪ್ರೀಂಕೋರ್ಟ್ ಆದೇಶ ಬಂದು ಒಂದು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಆದೇಶವನ್ನು ಅನುಷ್ಠಾನಗೊಳಿಸದೇ ನಿದ್ದೆ ಹೊಡೆಯುತ್ತಿದೆ. ಈ ನಿದ್ದೆ ಹೊಡೆಯುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸಲು ಈ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಆ.೧ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಈ ತೀರ್ಪನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಆದೇಶಿಸಿರುವುದರಿಂದ ತಕ್ಷಣವೇ ಅನುಷ್ಠಾನಗೊಳಿಸಬೇಕು. ಡಿಎಸ್‌ಎಸ್‌ನ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪನವರ ಜನ್ಮದಿನವಾದ ಜೂ.೯ರಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು

ಹಾಗೂ ಪ್ರೊ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಬಾಕಿ ಉಳಿದಿರುವ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಬಗರ್‌ಹುಕುಂ ಸಾಗುವಳಿಗೊಳಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಬಸಪ್ಪ, ಚಂದ್ರಣ್ಣ ಜೋಗಿ, ಬಿ.ಎ.ಕಾಟ್ಟೆ, ಎಂ.ಏಳುಕೋಟಿ, ನಾಗರಾಜ್, ಬೊಮ್ಮನಕಟ್ಟೆ ಕೃಷ್ಣ, ರಮೇಶ್ ಚಿಕ್ಕಮರಡಿ, ಶ್ರೀನಿವಾಸ್, ಹಸೂಡಿ ಬಸವರಾಜ್, ಹರಿಗೆ ರವಿ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!