ಶಿವಮೊಗ್ಗ : ಆಗಸ್ಟ್ ೧೪ : : ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಕ್ಷಮತಾ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಆಗಸ್ಟ್ ೨೦ರಿಂದ

೩೧ರವರೆಗೆ ನಗರದ ನೆಹರೂ ಸ್ಟೇಡಿಯಂನಲ್ಲಿ ಆಯೋಜಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಹೇಳಿದರು.


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಗ್ನಿವೀರ್ ಸೇನಾ ನೇಮಕಾತಿ

ರ‍್ಯಾಲಿಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ,

ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೆ ರವಾನಿಸಲಾಗಿದ್ದು, ಪ್ರತಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ದಿನಾಂಕವನ್ನು ನಿಗಧಿಗೊಳಿಸಲಾಗಿದೆ ಎಂದವರು ನುಡಿದರು.


ಈ ಸೈನಿಕ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ನೆರೆಯ ಜಿಲ್ಲೆಗಳಿಂದ ಪ್ರತಿದಿನ ೮೦೦-೯೦೦ಅಭ್ಯರ್ಥಿಗಳು ಭಾಗವಹಿಸುತ್ತಿದ್ದು, ಅವರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರು, ನೆರಳು, ಉಟೋಪಹಾರ ಹಾಗೂ ಸ್ನಾನ-ಶೌಚಾಲಯ ಮುಂತಾದ ತುರ್ತು ಅಗತ್ಯಗಳನ್ನು

ಒದಗಿಸಲು ಕ್ರಮಕೈಗೊಳ್ಳಲಾಗಿದ್ದು, ಅದರ ಉಸ್ತುವಾರಿಗಾಗಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದವರು ತಿಳಿಸಿದರು.


ಅಲ್ಲದೇ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಲಿರುವ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯ್ಕೆ ಪರೀಕ್ಷೆಗೆ ಬೇಕಾಗುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲು,

ವಿದ್ಯುತ್ ಸಂಪರ್ಕ ನಿರಂತರವಾಗಿರುಂತೆ ನೋಡಿಕೊಳ್ಳಲು ಹಾಗೂ ಸೇನಾ ನೇಮಕಾತಿ ಪ್ರಾಧಿಕಾರದ ಅಧಿಕಾರಿ-ಸಿಬ್ಬಂಧಿಗಳು ಸ್ಥಳೀಯವಾಗಿದ್ದು, ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಡಿ.ವೈಎಸ್ಪಿ. ಸುರೇಶ್, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿ ರವಿ, ಮಿಥುನ್‌ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!