ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಮತ್ತು ಸಮರ್ಪಣಾ ಮನೋಭಾವಗಳಿಗೆ ವಿಶೇಷ ಒತ್ತನ್ನು ನೀಡಬೇಕು. ಸಕಾರಾತ್ಮಕ ಚಿಂತನೆಗಳ ಮೂಲಕ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಮಹಾನ್ ಸಾಧಕರುಗಳು ಹಾಗೂ ಶ್ರೇಷ್ಠ ವಾಣಿಜ್ಯೋದ್ಯಮಿಗಳ ಆತ್ಮಚರಿತ್ರೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಅವರ ಪರಿಶ್ರಮದ ಹಾದಿಯ ಪರಿಚಯವಾಗುತ್ತದೆ ಅಲ್ಲದೆ ಸ್ಫೂರ್ತಿಯೂ ಸಹ ದೊರಕುತ್ತದೆ.

ಇದರಿಂದ ಬದುಕಿನಲ್ಲಿ ಮಹತ್ವವಾದುದನ್ನು ಸಾಧಿಸುವ ಬಯಕೆಯು ಉಂಟಾಗುತ್ತದೆ. ಅಲ್ಲದೆ ನಿಮ್ಮ ಬದುಕಿನಲ್ಲಿ ದೈಹಿಕ ಸದೃಢತೆ, ಭಾವನಾತ್ಮಕ ವ್ಯಕ್ತಿತ್ವದ ನಿರ್ವಹಣೆ, ಬೌದ್ಧಿಕ ವ್ಯಕ್ತಿತ್ವದ ಬೆಳವಣಿಗೆ,

ಆಧ್ಯಾತ್ಮ ಮತ್ತು ಸಮರ್ಪಣಾ ಮನೋಭಾವಗಳೆಂಬ ಐದು ಮಹತ್ವದ ವಿಷಯಗಳ ಕಡೆಗೆ ಗಮನವನ್ನು ಹರಿಸಿದರೆ ಶ್ರೇಷ್ಠ ಸಾಧನೆಯನ್ನು ಮಾಡುವುದು ಸಾಧ್ಯ ಎಂದು ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿಗಳಾದ ಡಾ ನಾಗರಾಜ ಆರ್ ಅವರು ನಗರದ ಪಿಇಎಸ್ ಐಎಎಮ್‌ಎಸ್ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ

ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ’ಅಭಿಖ್ಯಾನ- ೨೦೨೪’ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನುಡಿದರು. ಅಲ್ಲದೆ ಪಿಇಎಸ್ ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ ಹೊಸ ಕೋರ್ಸ್‌ಗಳನ್ನು ಕೂಡ ಕಾಲೇಜಿನಲ್ಲಿ ಪರಿಚಯಿಸಲಾಗುತ್ತಿದೆ. ಅಲ್ಲದೆ ಇದಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಒದಗಿಸಲಾಗಿದ್ದು ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ನುಡಿದರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣಾ ಎ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸುತ್ತಾ ವಿವಿಧ ವಿದ್ಯಾರ್ಥಿಗಳು ಮಾಡಿರುವ ಶೈಕ್ಷಣಿಕ ಸಾಧನೆ ಮತ್ತು ವಿವಿಧ ಪೋರಂಗಳ ಅಡಿಯಲ್ಲಿ ಪ್ರಸಕ್ತ ವರ್ಷದಲ್ಲಿ ಕೈಗೊಂಡಂತಹ ಕಾರ್ಯಕ್ರಮಗಳ ಕುರಿತು ಪರಿಚಯಿಸಿದರು. ಶೈಕ್ಷಣಿಕವಾಗಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ೯೭ ವಿದ್ಯಾರ್ಥಿಗಳಿಗೆ ಬುಕ್ ಕೂಪನ್‌ಗಳನ್ನು ವಿತರಿಸಲಾಯಿತು. ಅಲ್ಲದೆ ಒಂದು ವರ್ಷದ ಅವಧಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ರಂಗ ಹಾಗೂ ವಿವಿಧ ಫೋರಂಗಳು ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ

ಬಹುಮಾನಗಳನ್ನು ನೀಡಲಾಯಿತು. ವೇದಿಕೆಯಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಡಾ.ದಿಲೀಪ್ ಕುಮಾರ್ ಎಸ್ ಡಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೂಪ ಡಿ ಎಸ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ ಎಚ್ ಎಸ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಡಿ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದದವರು ಹಾಗೂ ಮೂರೂ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು.ಅನುಶ್ರೀ ಪ್ರಾರ್ಥಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಯಶಸ್ವಿತಾ ಚವ್ಹಾಣ್ ಅವರು ಸ್ವಾಗತಿಸಿದರು. ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀವತ್ಸ ಐತಾಳ್ ಅವರು ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪೂಜಾ ರಾನಡೆ ಅವರು ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!