ಸಾಗರ : ಮೆಸ್ಕಾಂ ಸಹಾಯಕ ಇಂಜಿನಿಯರ್ ಶಾಂತಕುಮಾರ ಸ್ವಾಮಿ ಯಾರೆಂದೆ ನನಗೆ ಗೊತ್ತಿಲ್ಲ. ಅವರಿಗೆ ಕಿರುಕುಳ ನೀಡಿದ್ದೇನೆ ಎಂದು ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಅಚ್ಚರಿ ಉಂಟು ಮಾಡಿದೆ. ಒಂದೊಮ್ಮೆ ನಾನು ಕಿರುಕುಳ ನೀಡಿದ್ದು ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಲ್ಲಿನ ಮೆಸ್ಕಾಂ ಕಚೇರಿ ಆವರಣದಲ್ಲಿ ಬುಧವಾರ ಮೆಸ್ಕಾಂನ ನೂತನ ವಾಹನಗಳಿಗೆ ಚಾಲನೆ ನೀಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ನಾನು ವಿದೇಶ ಪ್ರವಾಸದಲ್ಲಿದ್ದಾಗ ಅವರನ್ನು ಗಾಂಜಾ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಘಟನೆಗೂ ನನಗೂ ಸಂಬಂಧವಿಲ್ಲ. ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸುಮ್ಮನೆ ದಾಖಲೆ ಇಲ್ಲದೆ ಆರೋಪ ಹೊರಿಸುವುದನ್ನು ಸಹಿಸುವುದಿಲ್ಲ. ನ್ಯಾಯಾಲಯದ ಮೇಲೆ ಗೌರವ ಇದೆ. ಮುಂದಿನ ದಿನಗಳಲ್ಲಿ ಸುಳ್ಳು ಆರೋಪ ಮಾಡಿರುವುದರ ವಿರುದ್ದ ಮಾನನಷ್ಟ ಮೊಕದ್ದಮ್ಮೆ ದಾಖಲು ಮಾಡಲು ಚಿಂತನೆ ನಡೆಸಲಾಗಿದೆ. ಅಷ್ಟಕ್ಕೂ ನನ್ನ ಮೇಲೆ ಆರೋಪ ಮಾಡಿದ ಮೆಸ್ಕಾಂ ಅಭಿಯಂತರ ನನ್ನ ಕ್ಷೇತ್ರವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಪಕ್ಕದ ಸೊರಬ ಕ್ಷೇತ್ರದ ತಾಳಗುಪ್ಪದಲ್ಲಿ ಕೆಲಸ
ಮಾಡುತ್ತಿದ್ದಾನೆ. ಶಾಸಕರು ಎಂದು ಹೇಳಿದ್ದಾನೆ. ಯಾವ ಕ್ಷೇತ್ರದ ಶಾಸಕರು ಎಂದು ಉಲ್ಲೇಖಿಸಿಲ್ಲ. ಪ್ರಕರಣದ ಹಿಂದೆ ಯಾರದ್ದಾದರೂ ಪಿತೂರಿ ಇದ್ದರೂ ಇರಬಹುದು. ಶಾಂತಕುಮಾರ ವಿರುದ್ದ ಸಾಕಷ್ಟು ದೂರುಗಳು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ವಿಪರೀತ ಮಳೆ ನಡುವೆಯೂ ಮೆಸ್ಕಾಂ ಲೈನ್‌ಮ್ಯಾನ್‌ಗಳು, ಅಧಿಕಾರಿ ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಳೆಯ ನಡುವೆಯೂ ಹರಿದು ಬಿದ್ದ ತಂತಿಗಳು, ಮುರಿದು ಹೋಗಿದ್ದ ವಿದ್ಯುತ್ ಕಂಬಗಳನ್ನು ಹಾಕುವ ಮೂಲಕ ವಿದ್ಯುತ್ ಸಮಸ್ಯೆ
ಉಂಟಾಗದಂತೆ ನೋಡಿಕೊಂಡಿದ್ದಾರೆ. ಆಗಸ್ಟ್ ೧೫ರ ನಂತರ ಉತ್ತಮ ಕೆಲಸ ಮಾಡಿರುವ ಲೈನ್‌ಮ್ಯಾನ್‌ಗಳಿಗೆ ಸನ್ಮಾನ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಮೆಸ್ಕಾ ಅಧಿಕಾರಿಗಳಾದ ವೆಂಕಟೇಶ್, ಚನ್ನಕೇಶವ್, ಇಬ್ರಾಹಿಂ, ಕಾಂಗ್ರೇಸ್ ಪ್ರಮುಖರಾದ ಗಣಪತಿ ಮಂಡಗಳಲೆ, ಸುರೇಶಬಾಬು, ದಿನೇಶ್ ಡಿ. ಇನ್ನಿತರರು ಹಾಜರಿದ್ದರು.