ಶಿವಮೊಗ್ಗ,ಆ೦೭: ಕರ್ನಾಟಕ ಮಹಿಳಾ ನ್ಯಾಯವಾದಿಗಳ ಒಕ್ಕೂಟ(ಕೆಎಫ್‌ಡಬ್ಲ್ಯೂಎಲ್), ಶಿವಮೊಗ್ಗ ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಮಿತಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಅ.೧೦ರ ಬೆಳಿಗ್ಗೆ ೧೦ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಮಿತಿ ಅಧ್ಯಕ್ಷೆ ಸರೋಜ ಪಿ.ಚಂಗೊಳ್ಳಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೦೫ರಲ್ಲಿ ಶಿವಮೊಗ್ಗದಲ್ಲಿ ಮಹಿಳಾ ನ್ಯಾಯವಾದಿಗಳ ಪ್ರಾತೀಯ ಸಮ್ಮೇಳನ ನಡೆದಿದ್ದು, ಈಗ ನಡೆಯುತ್ತಿರುವುದು ೨ನೇ ಸಮ್ಮೇಳನವಾಗಿದ್ದು, ಸಮ್ಮೇಳನದಲ್ಲಿ ಸುಮಾರು ೭೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಮಹಿಳಾ ವಕೀಲರ ಸಂಖ್ಯೆ ೨೦ಸಾವಿರಕ್ಕೂ ಹೆಚ್ಚಿದ್ದು, ಮಹಿಳಾ ವಕೀಲರ ಹಿತರಕ್ಷಣೆ, ಅವರ ಕಾರ್ಯದಕ್ಷತೆ ಹೆಚ್ಚಿಸುವುದು. ಅವರಿಗೆ ಸಿಗಬೇಕಾದ ಸ್ಥಾನಮಾನ, ಅವಕಾಶ ಸಿಗುವಂತೆ ನೋಡಿಕೊಳ್ಳುವುದು ಕರ್ನಾಟಕ ಫೆಡರೇಶನ್ ಆಧ್ಯತೆಯಾಗಿದೆ ಎಂದರು.
ಪ್ರಸ್ತುತ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ವೇದಿಕೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲೂ ಸಹ ಮಹಿಳಾ ವಕೀಲರ ವೇದಿಕೆಗಳು ಸ್ಥಾಪಿಸುವ ನಿಟ್ಟಿನಲ್ಲಿ ಫೆಡರೇಷನ್ ಪ್ರಯತ್ನಿಸುತ್ತಿದೆ. ೨೦೦೨ರಲ್ಲಿ ಆರಂಭವಾದ ಕರ್ನಾಟಕ ಫೆಡರೇಷನ್ ಆಫ್ ವಿಮೆನ್ ಲಾಯರ್ಸ್ ಸಂಸ್ಥೆಯು ಹಲವು ಅಡೆತಡೆಗಳನ್ನು ದಾಟಿ ಈಗ ಸಶಕ್ತವಾಗಿ ನಿಂತಿದೆ ಎಂದರು.
ಸಮ್ಮೇಳನವನ್ನು ಹೈಕೋರ್ಟ್‌ನ ನ್ಯಾಯಮೂರ್ತಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಬಿ.ಎಂ.ಶ್ಯಾಮ್ ಪ್ರಸಾದ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯ್ಕ್, ಫೆಡರೇಷನ್‌ನ ಅಧ್ಯಕ್ಷೆ ಶೀಲಾ ಅನೀಶ್, ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ರಾಜ್ಯ ಮಹಿಳಾ ನ್ಯಾಯಾವಾದಿಗಳ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಸವರೆಡ್ಡಿ ಮದಿನೂರು, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದ ಪೂರ‍್ಯನಾಯ್ಕ್ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ ವಹಿಸಲಿದ್ದಾರೆ ಎಂದರು.
ನಂತರ ನಡೆಯುವ ಪ್ರಥಮ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಹಾಗೂ ಖ್ಯಾತ ಕಾನೂನು ತಜ್ಞ ಹೆಚ್.ಡಿ.ಆನಂದ್‌ಕುಮಾರ್ ಅವರು ಹೊಸ ಕಾನೂನುಗಳ ಬಗ್ಗೆ ವಿಷಯ ಮಂಡಿಸುವರು. ೨ನೇ ವಿಚಾರ ಗೋಷ್ಠಿಯಲ್ಲಿ ಮಹಿಳಾ ವಕೀಲರ ವೃತ್ತಿಪರತೆಯ ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರೋಪಯಗಳು ಕುರಿತು ಒಕ್ಕೂಟದ ಅಧ್ಯಕ್ಷೆ ಶೀಲಾ ಅನೀಶ್ ಮಾತನಾಡಲಿದ್ದಾರೆ ಎಂದರು.
ಸಂಜೆ ೪ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ,ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಎಸ್.ಶ್ರೀನಿವಾಸ, ಜಿಲ್ಲಾ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಪದಾಧಿಕಾರಿಗಳಾದ ಹೆಚ್.ಎಂ.ರೇಣುಕಮ್ಮ, ನಂದಿನಿ ದೇವಿ ಎಸ್.ಆರ್., ಕಿಲಕ ಮಧುಸೂದನ್, ಪೂರ್ಣಿಮಾ, ಪ್ರಮೀಳ, ಅಶ್ವಿನಿ,ರೇಖಾ, ವಿದ್ಯಾರಾಣಿ ಉಪಸ್ಥಿತರಿದ್ದರು.