ಶಿವಮೊಗ್ಗ,ಜು.20:ನಗರದ ಹಲವು ಪ್ರಮುಖ ವೃತ್ತಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಆಗಿದ್ದು, ದ್ವಿಚಕ್ರ ವಾಹನ ಸವಾರರು ಬಲಿಯಾಗುವ ಮುನ್ನ ಪಾಲಿಕೆ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರದ ಕುವೆಂಪು ರಸ್ತೆ ಒಂದರಲ್ಲೇ ಬೃಹದಾಕಾರದ ಗುಂಡಿಗಳಿದ್ದು, ಮಳೆಯ ನೀರು ತುಂಬಿರುವುದರಿಂದ ಗುಂಡಿಗಳು ಕಾಣದೆ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದು, ಹಲವರಿಗೆ ಗಾಯಗಳು ಆಗಿವೆ. ಜೈಲು ವೃತ್ತ, ಗುತ್ತಿ ನರ್ಸಿಂಗ್
ಎದುರು ಭಾಗ, ಬಿಜೆಪಿ ಕಚೇರಿಯ ರಸ್ತೆ ತಿರುವಿನಲ್ಲಿ, ನಂದಿ ಪೆಟ್ರೋಲ್ ಬಂಕ್ ಎದುರುಗಡೆ ಗುಂಡಿಗಳಿದ್ದು, ತೀವ್ರ ಅಪಾಯ ಸಂಭವಿಸುವ ಮುನ್ನ ಪಾಲಿಕೆ ಅಧಿಕಾರಿಗಳು ರಸ್ತೆ ಗುಂಡಿಯನ್ನು ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದು,
ಅದಲ್ಲದೆ ಯುಜಿಡಿ ಕಾಮಗಾರಿಗಾಗಿ ತೆಗೆದ ಗುಂಡಿಗಳು ಕೂಡ ಅಪೂರ್ಣ ಮಾಡಿ ಹಾಗೆಯೇ ಬಿಟ್ಟಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ದುರ್ಗಿಗುಡಿ ಮುಖ್ಯ ರಸ್ತೆಯ ಲಕ್ಷ್ಮಿ ಗ್ಯಾಲಕ್ಸಿಯ ಬಳಿ ಕೂಡ ದೊಡ್ಡ ಗುಂಡಿಯಿದ್ದು, ಬ್ಯಾರಿಗೇಡೊಂದನ್ನು ಬಹಳ ದಿನಗಳಿಂದ ಅಡ್ಡ ಇಟ್ಟಿದ್ದು, ಇದುವರೆಗೂ ಗುಂಡಿ ಮುಚ್ಚುವ ಕಾರ್ಯವನ್ನು ಪಾಲಿಕೆ ಮಾಡಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ನಾಗರೀಕರು ಒತ್ತಾಯಿಸಿದ್ದಾರೆ.