ಶಿವಮೊಗ್ಗ: ಆಹಾರ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ, ಶಕ್ತಿ ಮತ್ತು ಸಂತೋಷದ ಮೂಲಾಧಾರವಾಗಿದೆ. ದೈಹಿಕ ಶ್ರಮ ಮತ್ತು ಮನಸ್ಸಿಗೆ ಹಿತವೆನಿಸುವ ಸುಂದರ ಪರಿಸರದಲ್ಲಿ ಆಹಾರ ಸೇವನೆಯಿಂದ ಮನಸ್ಸಿಗೆ ಅಹ್ಲಾದ ದೊರೆಯುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಸಹಭೋಜನದಿಂದ ಸಾಮರಸ್ಯ ಮತ್ತು ಬಾಂಧವ್ಯ ಸಹ ವೃದ್ಧಿಸುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.


ಪರೋಪಕಾರಂ ಕುಟುಂಬದ ವತಿಯಿಂದ ೧೭-೦೭-೨೦೨೪ರ ಬುಧವಾರ ಬೆಳಿಗ್ಗೆ ೬ ಗಂಟೆಗೆ ಇಲ್ಲಿನ ಗುಂಡಪ್ಪ ಶೆಡ್‌ನ ಮುಖ್ಯರಸ್ತೆಯಲ್ಲಿರುವ ವಿಶಾಲ ಸೂರ್ಯ ಉದ್ಯಾನವನದಲ್ಲಿ ೭೯೪ನೇ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪಾರ್ಕ್‌ನ ಸ್ವಚ್ಛತೆ, ಸಸಿ ನೆಡುವಿಕೆ ಮತ್ತು ನೆಟ್ಟ ಗಿಡಗಳ ಆರೈಕೆ ಸಂದರ್ಭದಲ್ಲಿ ನಡೆದ ಉಪಹಾರ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ನಾವು ನಮ್ಮ ಕುಟುಂಬದವರು, ಸ್ನೇಹಿತರು, ಬಂಧು- ಬಳಗದವರೊಂದಿಗೆ ಮದುವೆ, ಗೃಹ ಪ್ರವೇಶ ಮತ್ತಿತರೆ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಒಂದೆಡೆ ಸೇರಿ ಉಪಹಾರ, ಭೋಜನ ಮಾಡುವುದು ಸಾಮಾನ್ಯ. ಆದರೆ ನಗರದ ವಿವಿಧೆಡೆ ವಾಸಿಸುತ್ತಿರುವ ವಿವಿಧ ಜಾತಿ, ಮತ, ಧರ್ಮದವರು ಸಾಮಾಜಿಕ ಕಾರ್ಯದ ಹಿನ್ನೆಲೆಯಲ್ಲಿ ಒಂದೆಡೆ ಸೇರಿ ಸ್ವಚ್ಛತೆ, ಹಸಿರೀಕರಣ ಮತ್ತಿತರೆ ಕಾರ್ಯಗಳ ನಂತರ ಒಟ್ಟಾಗಿ ಸೇರಿ ಆಹಾರ ಸೇವಿಸುವುದು ಬಹು ಅಪರೂಪ. ಪರೋಪಕಾರಂ ಕುಟುಂಬವು ಉಪಕಾರದೊಂದಿಗೆ ಉಪಹಾರದ ಮೂಲಕ ಸುಂದರ, ಸ್ವಾಸ್ಥ್ಯ ಹಾಗೂ ಸ್ವಚ್ಛ ಸಮಾಜವನ್ನು ರೂಪಿಸುತ್ತಿದೆ ಎಂದು ಪ್ರಶಂಸಿಸಿದರು.


ಪರೋಪಕಾರಂ ವತಿಯಿಂದ ಕೆಲ ವರ್ಷಗಳ ಹಿಂದೆ ವಿಶಾಲ ಸೂರ್ಯ ಉದ್ಯಾನವನದಲ್ಲಿ ನೆಟ್ಟ ಸಸಿಗಳು ಮರವಾಗಿ ಬೆಳೆದಿವೆ. ಗಿಡಗಳನ್ನು ನೆಡುವುದಷ್ಟೇ ಮುಖ್ಯವಲ್ಲ ಅವುಗಳನ್ನು ಪೋಷಿಸುವುದು ಸಹ ಅತಿಮುಖ್ಯವೆಂದರು.


ಅಮೇರಿಕಾದ ನ್ಯೂಜರ್ಸಿ ನಿವಾಸಿಯಾಗಿರುವ ಉಷಾರಾಣಿ ಜಾಧವ್ ಅವರು ತಮ್ಮ ತವರು ಶಿವಮೊಗ್ಗಕ್ಕೆ ಬಂದಾಗ ತಪ್ಪದೇ ಪರೋಪಕಾರಂನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದರ ಬಗ್ಗೆ ತಿಳಿದ ಈಶ್ವರಪ್ಪನವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ತಾಯಿ ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಭಾರತೀಯ ಸಂಸ್ಕೃತಿ- ಸಂಸ್ಕಾರದ ಮಹತ್ವವನ್ನು ಮನದಟ್ಟು ಮಾಡಿಸಿದರೆ ಅವರು ಜಗತ್ತಿನ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಸಹ ದೇಶಿ ಸಂಸ್ಕೃತಿ, ಆಚಾರ- ವಿಚಾರ, ಆಚರಣೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತಾರೆಂದರು.


ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಪರೋಪಕಾರಂ ಕುಟುಂಬದ ಕಟ್ಟಾಳು ಎನ್.ಎಂ. ಶ್ರೀಧರ್ ಲೀಲಾಬಾಯಿ ಎನ್.ಎಂ., ಅನಿಲ್ ಹೆಗ್ಗಡೆ, ಕಾರ್ಪೆಂಟರ್ ಕುಮಾರ್, ಕಿರಣ್ ಆರ್., ಉಷಾರಾಣಿ ಜಾದವ್, ವೆಂಕಟೇಶ್ ಕೆ.ಎಸ್., ರಾಘವೇಂದ್ರ ಎನ್.ಎಂ., ಕೃಷ್ಣಮೂರ್ತಿ, ಸಾರಥಿ ಶಿವಾನಂದ್, ಸುರೇಶ್ ಕೆ.ಎಸ್., ವಿಜಯ್ ಕಾರ್ತಿಕ್, ವೈಷ್ಣಿಕ, ವೈಶಾಖ, ಚರಿತಾ (ಚೆರ್ರಿ), ಸ್ಪಂದನಾ, ಶ್ರೀಯಾನ್, ಪ್ರಶಾಂತ್, ರೂಪ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!