ಶಿವಮೊಗ್ಗ,ಜೂ.26: ಮಾದಕ ವಸ್ತುಗಳಿಂದ ದೂರವಿರಿ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಕರೆ ನೀಡಿದರು.

ಅವರು ಇಂದು ಜಿಲ್ಲಾ ಪೊಲೀಸ್ ಇಲಾಖೆ, ಕೋಟೆ ಪೊಲೀಸ್ ಠಾಣೆ. ಸಹ್ಯಾದ್ರಿ ಕಲಾ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಯುವಕರು ಅದರಲ್ಲೂ ವಿದ್ಯಾರ್ಥಿಗಳು ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ. ಕುತೂಹಲಕ್ಕಾಗಿ ಮಾದಕ ವಸ್ತುಗಳ ಚಟವನ್ನು ಅಂಟಿಸಿಕೊಂಡು ಅದಕ್ಕೆ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಯುವಕರು ಇದರಿಂದ ಹೊರ ಬರಬೇಕು. ಪೊಲೀಸ್ ಇಲಾಖೆಯ ಜೊತೆಗೆ ಪೋಷಕರು, ಶಿಕ್ಷಕರು, ಸಂಘ ಸಂಸ್ಥೆಗಳು ಹೀಗೆ ಎಲ್ಲರೂ ಸೇರಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಿದಾಗ ಮಾತ್ರ ಇದನ್ನು ತಡೆಯಲು ಸಾಧ್ಯ ಎಂದರು.

ಮುಖ್ಯವಾಗಿ ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತರಾಗಬೇಕಾಗಿದೆ. ಒಳ್ಳೆಯ ಸ್ನೇಹಿತರನ್ನು ಪಡೆಯಿರಿ. ಯಾರಾದರೂ ದುಶ್ಚಟಕ್ಕೆ ಬಲಿಯಾಗಿದ್ದರೆ ಆ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದವರು ಕೂಡ ಗಾಂಜಾ ಬೆಳೆಯುವ ಉದಾಹರಣೆ ಇದೆ. ವಿದ್ಯಾವಂತರೆ ಮಾದಕ ವ್ಯಸನಿಗಳಾಗಿ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಸಮಾಜದ ಹಿತ ಕಾಪಾಡುವವರೇ ಈ ರೀತಿಯಾದರೆ ಭವಿಷ್ಯದ ಗತಿ ಏನು? ಇದನ್ನು ತಪ್ಪಿಸಬೇಕು ಎಂಬ ಹಿನ್ನಲೆಯಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸೈಯದ್ ಸನಾವುಲ್ಲಾ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಪೋಷಕರ ಕಷ್ಟಗಳನ್ನು ನೆನಪು ಮಾಡಿಕೊಳ್ಳಿ. ಜೊತೆಗೆ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ದುಶ್ಚಟಗಳಿಂದ ದೂರವಿರಿ ಎಂದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್ ಮಾತನಾಡಿ, ಪೊಲೀಸ್ ಇಲಾಖೆಯ ಅಂಕಿ ಅಂಶಗಳು ಮಾದಕ ವ್ಯಸನಿಗಳು ಹೆಚ್ಚಾಗುತ್ತಿರುವÀ ಬಗ್ಗೆ ಆತಂಕ ಮೂಡಿಸುತ್ತವೆ. ಕೆಲವು ವರ್ಷಗಳ ಹಿಂದೆ ವರ್ಷಕ್ಕೆ ಮೂರು ನಾಲ್ಕು ಗಾಂಜಾ ಕೇಸ್ ಗಳು ಇರುತ್ತಿದ್ದವು. ಈಗ ವರ್ಷಕ್ಕೆ ಮುನ್ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದರೆ ಇದನ್ನು ತಡೆಗಟ್ಟಬೇಕಾದ ಅಗತ್ಯವಿದೆ ಎಂದರು.

ಕೋಟೆ ಪೊಲೀಸ್ ಠಾಣೆಯ ರವಿಕುಮಾರ್ ಅವರು ಪ್ರಾತ್ಯಕ್ಷಿಕೆ ಮೂಲಕ ಸೈಬರ್ ಅಪರಾಧಗಳು, ಇದರಿಂದ ಎಚ್ಚರಿಕೆ ವಹಿಸಬೇಕಾದ ಕ್ರಮಗಳು, ಮೊಬೈಲ್ ನ ಕೆಲವು ಆಪ್ ಗಳಿಂದ ಆಗುವ ತೊಂದರೆಗಳು, ಹಣ ಕದಿಯುವ ಜಾಲ ಮುಂತಾದ ವಿಷಯಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. 

ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ. ಬಾಬು ಅಂಜನಪ್ಪ, ಕೋಟೆ ಪೊಲೀಸ್ ಠಾಣೆಯ ಕೊಪ್ಪದ್ ಸಿ.ಆರ್. ಮುಂತಾದವರಿದ್ದರು. ಪ್ರಣತಿ ಪ್ರಾರ್ಥಿಸಿದರು. 

By admin

ನಿಮ್ಮದೊಂದು ಉತ್ತರ

error: Content is protected !!