ಸಾಗರ, ಜೂ.೧೨- ರಾಜ್ಯದಲ್ಲಿ ೮ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ೫೭೫೬ ಕೋಟಿ ರೂ. ಮಂಜೂರಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಭಾರತೀಯ ಜನತಾ ಪಕ್ಷದಿಂದ ಏರ್ಪಡಿಸಿದ್ದ ಕಾರ್ಯಕರ್ತರಿಗೆ, ಮತದಾರರಿಗೆ ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿ, ಇದರಲ್ಲಿ ಶಿವಮೊಗ್ಗ ಜಿಲ್ಲೆಗೆ ೨೬೨೩ ಕೋಟಿ ರೂ. ಬಂದಿದೆ. ಇದರಲ್ಲಿ ಸಾಗರಕ್ಕೆ ಶೇ. ೭೦ ರಷ್ಟು ಹಣ ಮಂಜೂರಾಗಿದೆ. ಶಿವಮೊಗ್ಗ ಲಯನ್ಸ್ ಸಫಾರಿಯಿಂದ ಆನಂದಪುರದ ವರೆಗೆ ೬೦೦ ಕೋಟಿ ಹಾಗೂ ಆನಂದಪುರಂ ನಿಂದ ಚೂರಿಕಟ್ಟೆವರೆಗೆ ೪೦೦ ಕೋಟಿ ರೂ. ಮಂಜೂರಾಗಿದೆ. ಬೈಂದೂರು-ಹೊಸನಗರ- ಶಿಕಾರಿಪುರ ಹೆದ್ದಾರಿಗೆ ೯೨೦ ಕೋಟಿ ರೂ. ಮಂಜೂರಾಗಿದೆ ಎಂದರು.
ಬರುವ ದಿನಗಳಲ್ಲಿ ಶರಾವತಿ ಮುಳುಗಡೆ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜೋಗ್ ಅಭಿವೃಧ್ಧಿಗೂ ಒತ್ತು ನೀಡಲಾಗಿದೆ. ಹೊನ್ನಾವರಕ್ಕೆ ಕೊಂಕಣ ರೈಲ್ವೆ ಸಂಪರ್ಕಕ್ಕೆ ಹೆಚ್ಚಿನ ಪ್ರಯತ್ನ ಮಾಡಲಾಗುವುದು. ಮತದಾರರ ಆಶಯದಂತೆ ಸರ್ಕಾರದ ಯೋಜನೆ ಮತ್ತು ಪಕ್ಷದ ಸಿದ್ಧಾಂತದಡಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಹಾಗೂ ವಿರೋಧ ಪಕ್ಷಗಳ ತಂತ್ರ, ಪ್ರತಿತಂತ್ರದ ನಡುವೆಯೂ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ. ಮೋದಿಯವರ ಮುಖ ನೋಡಿ ಮತದಾರರು ಮತ ನೀಡಿದ್ದಾರೆ ಎಂದು ಶಾಸಕ ಬೇಳೂರು ಹೇಳಿದ್ದಾರೆ. ಅವರನ್ನಾದರೂ ಒಪ್ಪಿಕೊಂಡಿದ್ದಾರಲ್ಲ ಎಂದು ಕುಟುಕಿದರು. ಗ್ಯಾರಂಟಿಗೆ ಜನ ತಮಗೇ ಮತ ನೀಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಅಹಂಕಾದ ಮಾತನಾಡಿದ್ದರು. ಇನ್ನಾದರೂ ಅಹಂಕಾರದ ಮಾತು ನಿಲ್ಲಿಸಿ, ಒಟ್ಟಾಗಿ ಕೆಲಸ ಮಾಡೋಣ ಎಂದರು.
ನೂತನ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಚುನಾವಣೆಯಲ್ಲಿ ವಿರೋಧಿಗಳು ಮಾಡಿದ ಅಪಪ್ರಚಾರಕ್ಕೆಲ್ಲ ಮತದಾರರು ಉತ್ತರ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಜೊತೆಗೆ ಮಹಿಳೆಯರಿಗೆ ೧ ಲಕ್ಷ ಕೇಂದ್ರದಿಂದ ಬರುತ್ತದೆ ಎಂಬ ಸುಳ್ಳು ಭರವಸೆಯನ್ನು ಮಹಿಳೆಯರು ತಿರಸ್ಕರಿಸಿದ್ದಾರೆ. ಮೋದಿ ಸರ್ಕಾರದಲ್ಲಿ ಯಾವುದೇ ಹಗರಣವಾಗಿಲ್ಲ. ಅವರ ನಾಯಕತ್ವದಡಿ ರಾಘವೇಂದ್ರ ಅವರು ಸಚಿವರಾಗದಿದ್ದರೂ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಮಾತನಾಡಿ, ಸಾಮರಸ್ಯ ಇರುವ ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆ ಒಂದು ಸಾಧನೆಯೋ, ಸವಾಲೋ ಎನ್ನುವ ರೀತಿಯಲ್ಲಿ ನಡೆಯಿತು. ಶೂಟಿಂಗ್ ಗೆ ಬಂದವರೋ ಎನ್ನುವ ಸಂದೇಶವೂ ರವಾನೆಯಾಯಿತು. ವ್ಯಕ್ತಿನೋ, ಪಕ್ಷವೋ ಮುಖ್ಯ ಎಂಬ ಚರ್ಚೆ ನಡೆಯಿತು. ಶಿಕಾರಿಪುರದಲ್ಲಿ ಶಿಕಾರಿ ಮಾಡುವುದಾಗಿ ಗರ್ಜಿಸಿದರು. ರಾಘವೇಂದ್ರ ಏನೂ ಕೆಲಸ ಮಾಡಿಲ್ಲ ಎಂದು ಅಪಪ್ರಚಾರ ಮಾಡಿದರು. ಆದರೂ ರಾಘವೇಂದ್ರ ಸಂಯಮದಿಂದ ಗೆದ್ದರು. ಕಳೆದ ೧೫ ವರ್ಷಗಳಿಂದ ಯಾರ ವಿರೋಧ ಕಟ್ಟಿಕೊಳ್ಳದೇ ಗೆದ್ದಿರುವುದು ಇವರ ವಿಶೇಷತೆ ಎಂದರು.
ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಕಾರ್ಯಕರ್ತರ ಸಮಯ ಮತ್ತು ಶ್ರಮ ಚುನಾವಣೆಯಲ್ಲಿ ಫಲ ನೀಡಿದೆ. ಇವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ರಾಘವೇಂದ್ರ ಅವರ ಜನಪರ ಕೆಲಸಕ್ಕೆ ಮತದಾರರು ಬೆಂಬಲಿಸಿದ್ದಾರೆ. ಕೇಂದ್ರದಲ್ಲಿ ಮಂತ್ರಿಯಾಗಿಲ್ಲ ನಿರಾಸೆ ಬೇಡ. ದೇವೇಗೌಡರು ಶಾಸಕರಾದ ೨೬ ವರ್ಷದ ನಂತರ ಮಂತ್ರಿಯಾಗಿದ್ದರು. ಮುಂದೆ ಅವಕಾಶ ಒದಗಿಬರುತ್ತದೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ಒಂದು ಕಡೆ ಬಂಧುಗಳು ಮತ್ತೊಂದು ಕಡೆ ತಲೆ ಕಾದವರು ಇದ್ದರು. ಆದರೆ ನಾವು ವಿಚಲಿತರಾಗದೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದೆವು. ಹೊರೆದ ದಾತಾರಂಗೆ ಶಿರವ ಒಪ್ಪಿಸುವೆ ಎಂಬಂತೆ ಯಡಿಯೂರಪ್ಪನವರನ್ನು ಬೆಂಬಲಿಸಿದೆವು. ಈ ಮೊದಲೇ ಪೂರ್ವಭಾವಿಯಾಗಿ ಈಡಿಗ ಸಮಾವೇಶ ಮಾಡಿ ಟೆಸ್ಟ್ ಡೋಸ್ ನೀಡಿದ್ದೆವು. ಎಲ್ಲ ಜಾತಿ ವರ್ಗದವರು ಬಿಜೆಪಿಗೆ ಮತ ನೀಡಿದ್ದಾರೆ. ಚುನಾವಣಾ ತಂತ್ರ ಫಲ ನೀಡಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಶಾಸಕರು ನಮ್ಮ ಪಕ್ಷದ ಕಾರ್ಯಕರ್ತರನ್ನು ರಾಜಕೀಯ ದ್ವೇಷದಿಂದ ಗಡಿಪಾಡು ಮಾಡಿದರು. ತಾಲ್ಲೂಕಿನಲ್ಲಿ ದಬ್ಬಾಳಿಕೆ ರಾಜಕಾರಣ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಕಳೆದ ೫ ವರ್ಷದಲ್ಲಿ ಒಂದೂ ಹೊಡೆದಾಟ ನಡೆದಿರಲಿಲ್ಲ. ಈಗ ಎಲ್ಲ ಕಡೆ ದೊಂಬಿ ಗಲಾಟೆ ನಡೆಯುತ್ತಿದೆ. ಇದರ ವಿರುದ್ಧ ಬರುವ ದಿನಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು.
ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಡಾ.ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಪ್ರಶಾಂತ ಕೆ.ಎಸ್., ಮಹೇಶ್, ಸುವರ್ಣ ಟೀಕಪ್ಪ, ವಿರೇಂದ್ರ ಪಾಟೀಲ್, ಮಹೇಶ್ವರ, ಪ್ರಸನ್ನ ಕೆರೆಕೈ, ಭರ್ಮಪ್ಪ, ಗಾಯತ್ರಿ ಮಹೇಶ್, ಮಂಗಳಾ, ಜಯಲಕ್ಷ್ಮಿ ನಾರಾಯಣಪ್ಪ, ಮಧುರಾ ಶಿವಾನಂದ, ಆರ್.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ನೂತನ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಪರಿಷತ್ ಸದಸ್ಯ ಡಾ.ಸರ್ಜಿಯವರನ್ನು ಅಭಿನಂದಿಸಲಾಯಿತು.
ನಂದಿನಿ ಬಸವರಾಜು ಪ್ರಾರ್ಥಿಸಿದರು. ದೇವೇಂದ್ರಪ್ಪ ಸ್ವಾಗತಿಸಿದರು. ಗಣೇಶ್ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು. ರಮೇಶ್ ಹಾರೆಕೊಪ್ಪ ನಿರೂಪಿಸಿದರು.