ಶಿವಮೊಗ್ಗ: ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಮತದಾರರಿಗೆ ಕೃತಜ್ಞತೆ ಹೇಳುವ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಸೋಲು, ಗೆಲುವು ಇರುತ್ತದೆ. ನಾವು ಸೋತಿರಬಹುದು. ಈ ಕಾರಣಕ್ಕಾಗಿ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎಂಬ ಅಪಪ್ರಚಾರ
ಮಾಡಲಾಗುತ್ತಿದೆ. ಯಾವ ಗ್ಯಾರಂಟಿಗಳನ್ನೂ ನಾವು ನಿಲ್ಲಿಸುವುದಿಲ್ಲ. ಸದ್ಯಕ್ಕೆ ಚುನಾವಣೆಯಲ್ಲಿ ನಡೆದ ತಂತ್ರ, ಕುತಂತ್ರದ ಬಗ್ಗೆಯೂ ನಾವು ಮಾತನಾಡುವುದಿಲ್ಲ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ.
ಬೂತ್ ಮಟ್ಟದಿಂದ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.
ಬಿಜೆಪಿ ೪೦೦ಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದೇ ಎಂಬುದನ್ನು ಮಾಧ್ಯಮಗಳೇ ಪದೇ ಪದೇ ಹೇಳಿದವು. ಬಿಜೆಪಿಯ ಗೆಲುವಿಗೆ ಅದು
ಸಹಕಾರಿಯಾಗಿರಬಹುದು. ಆದರೆ, ಎಲ್ಲಾ ಕಡೆ ಆಗಿಲ್ಲ ಎಂಬುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉತ್ತರ ಭಾರತದಲ್ಲಿ ಬಿಜೆಪಿ ಒಲವು ಸಿಕ್ಕಿಲ್ಲ ಎಂಬುದು ಕೂಡ ಸತ್ಯ. ಕಾಂಗ್ರೆಸ್ ಸಮಾಧಾಕರವಾದ ರೀತಿ ಸ್ಥಾನಗಳನ್ನು ಗೆದ್ದಿದೆ.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಾಲಿಕೆ ಚುನಾವಣೆಗಳಿಗೆ ನಾವು ಮತ್ತೆ ಸಿದ್ಧವಾಗುತ್ತೇವೆ. ಸೋಲಿನ ಹೊಣೆ ಹೊತ್ತುಕೊಳ್ಳುವುದರ ಜೊತೆಗೆ ಮುಂದಿನ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ಯೋಚಿಸುತ್ತೇವೆ ಎಂದರು.
ಕುಮಾರ್ ಬಂಗಾರಪ್ಪನವರ ವಿರುದ್ಧ ಪ್ರತಿಭಟನೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸ್ಯಾಡಿಸ್ಟ್ ಗಳ ಬಗ್ಗೆ ನಾವು ಹೆಚ್ಚು ಮಾತನಾಡಬೇಕಾಗಿಲ್ಲ. ಪ್ರಚಾರದ ಬಗ್ಗೆಯೇ ಅಪಪ್ರಚಾರ ಮಾಡಲಾಯಿತು. ಗೀತಾ ಶಿವರಾಜ್ ಕುಮಾರ್ ನಾನು ಸ್ಪರ್ಧಿಸಿದಾಗ ತೆಗೆದುಕೊಂಡ ಮತಕ್ಕಿಂತ ಹೆಚ್ಚಿನ ಮತ ತೆಗೆದುಕೊಂಡಿದ್ದಾರೆ ಎಂದರು.
ನೀಟ್ ಪರೀಕ್ಷೆಯಲ್ಲಿ ಅವಾಂತರ
ಶಿವಮೊಗ್ಗ: ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಅವಾಂತರವಾಗಿದ್ದು, ಕೇಂದ್ರ ಸರ್ಕಾರ ಇದನ್ನು ಸರಿಪಡಿಸಬೇಕಾಗಿದೆ. ಮಕ್ಕಳನ್ನು ದಿಕ್ಕು ತಪ್ಪಿಸಲಾಗಿದೆ. ಮನಸ್ಸಿಗೆ ಬಂದಂತೆ ಪರೀಕ್ಷೆ ನಡೆಸಲಾಗಿದೆ. ಹಲವು ಗುಮಾನಿಗಳು ಕೂಡ ಇಲ್ಲಿವೆ. ಇದೆಲ್ಲ ತನಿಖೆ ಮಾಡಬೇಕಾಗಿದೆ. ಅಗತ್ಯವಿದ್ದರೆ ಮರು ಪರೀಕ್ಷೆ ಮಾಡಬೇಕು ಎಂದು ಮಧು ಬಂಗಾರಪ್ಪ ಹೇಳಿದರು.
ಬಿಜೆಪಿಯವರು ನಾನು ಶೇ. ೧೦ ರಷ್ಟು ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದಾಗ ಟೀಕಿಸಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇನೆ. ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಶಾಲಾ ಮಕ್ಕಳಿಗೆ ಬುಕ್ಸ್, ಶೂ, ಮಧ್ಯಾಹ್ನದ ಊಟ, ಮೊಟ್ಟೆ ಎಲ್ಲಾ ಕೊಡುತ್ತೇವೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಷ್ಟೇ ಎಂದರು.