ಶಿವಮೊಗ್ಗ : ಸರಳ, ಸಜ್ಜನಿಕೆಯ ಹಾಗೂ ಸೇವಾ ಮನೋಭಾವವನ್ನು ಹೊಂದಿರುವ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್. ದತ್ತಾತ್ರಿ ಹೇಳಿದರು.
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರ
ನಿವಾಸದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಪ್ರತಿಯೊಬ್ಬ ಕಾರ್ಯಕರ್ತರೂ ಎಲ್ಲ ಮತದಾರರನ್ನು ಕರೆ ತಂದು ಮತ ಹಾಕಿಸುವಂತಾಗಬೇಕು,
ದೂರ ಪ್ರದೇಶದಲ್ಲಿದ್ದವರಿಗೆ ಹಾಗೂ ವಯೋ ವೃದ್ಧರಿಗೆ ವಾಹನ ವ್ಯವಸ್ಥೆಗಳ ಮೂಲಕ ಮತಗಟ್ಟೆಗೆ ಕರೆತಂದು, ವಾಪಾಸು ಮನೆಗೆ ಸುರಕ್ಷಿತವಾಗಿ ಕಳಿಸುವಂತಹ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ,ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಕಾಂಕ್ಷೆಯಿಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ, ಅನೇಕ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ, ರಾಜಕೀಯದಲ್ಲೂ ಸೇವೆ ಸಲ್ಲಿಸಲು ಭಾರತೀಯ ಜನತಾ ಪಾರ್ಟಿ ಅವಕಾಶವನ್ನು ಕೊಟ್ಟಿದೆ,
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಮತ್ತು ಸೌಲಭ್ಯಗಳು ದೊರಕುವಂತಾಗಬೇಕೆಂಬುದು ನನ್ನ ಬಯಕೆ. ಪಕ್ಷದ ಕಾರ್ಯಕರ್ತರೇ ಸಂಘಟನಾ ಶಕ್ತಿಯಾಗಿದ್ದಾರೆ, ಕ್ಷೇತ್ರದಲ್ಲಿ 85 ಸಾವಿರ ಮತದಾರರಿದ್ದು, ಪ್ರತಿ ಮತದಾರರನ್ನು ಕಾರ್ಯಕರ್ತರು ತಲುಪುವ ಕೆಲಸವನ್ನು
ಮಾಡಬೇಕು. ಹೋದ ಕಡೆಯಲ್ಲೆಲ್ಲಾ ಪದವೀಧರರು ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ತಂದುಕೊಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್. ಮಾಲತೇಶ್, ಬಿಜೆಪಿ ನಗರಾಧ್ಯಕ್ಷರಾದ ಮೋಹನ ರೆಡ್ಡಿ, ಎನ್ ಡಿ ಸತೀಶ್, ಮಲ್ಲಿಕಾರ್ಜುನ , ಮಹಾಶಕ್ತಿ ಕೇಂದ್ರದ ಪ್ರಮುಖರು ಸೇರಿದಂತೆ ಹಲವರು ಹಾಜರಿದ್ದರು.