
ತುಂಗಾತರಂಗ ವರದಿ
ಶಿವಮೊಗ್ಗ,ಜೂ.22: ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ. ಮಿತಿಮೀರಿ ಸೊಂಕು ಕಾಣಿಸಿಕೊಳ್ಳುತ್ತಿರು ಹಿನ್ನೆಲೆಯಲ್ಲೆ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಯಾಗಿದೆ.
ಈ ನಡುವೆ ಮೂರು ದಿನದ ಹಿಂದೆ ರೈತನೂ ಆಗಿರುವ ಕಬ್ಬಿನ ವ್ಯಾಪಾರಸ್ಥನಿಗೆ ಕೊರೊನಾ ಸೋಂಕು ಪತ್ತೆಯಾಗಿರುವುದು ಹಾಗೂ ಅವರ ತಿರುಗಾಟದ ಮಾಹಿತಿ ಜಿಲ್ಲಾಡಳಿತದಲ್ಲೆ ಭಾರೀ ಭಯಹುಟ್ಟಿಸಿದೆ.
ಈ ವ್ಯಕ್ತಿಗೆ ಕೊರೊನಾ ಬಂದಿರುವುದು ಸದ್ಯ ಮೂರು ತಾಲೂಕಿನ ಜನರ ನಿದ್ದೆಗೆಡಿಸಿದೆ. ಇನ್ನೂ ಎರಡು ಜಿಲ್ಲೆಗೆ ಈತ ಪ್ರವಾಸ ಮಾಡಿದ್ದಾನೆ.. ಸದ್ಯ ಒಬ್ಬ ಕಬ್ಬಿನ ವ್ಯಾಪಾರಿಗೆ ಬಂದಿರುವ ಕೊರೊನಾ ಸೋಂಕು ನೂರಾರು ಜನರನ್ನು ಸದ್ಯ ಜಿಲ್ಲೆಯಲ್ಲಿ ಕೊರೊನಾ ಸಂಕಷ್ಟಕ್ಕೆ ಸಿಲುಕಿಸಿದೆ. ಕಬ್ಬು ವ್ಯಾಪಾರಸ್ಥರನ ಟ್ರಾವಲ್ ಹಿಸ್ಟರಿಯ ಅವಾಂತರ ಆತಂಕ ಸೃಷ್ಟಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 110ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಈ ನಡುವೆ ಜೂ. 18 ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನಪೇಟೆಯ ಸಮೀಪದ ಶೆಟ್ಟಿಕೊಪ್ಪ ಗ್ರಾಮದ ಕಬ್ಬು ವ್ಯಾಪಾರಸ್ಥನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈತನಿಗೆ ಕೊರೊನಾ ಪಾಸಿಟಿವ್ ಬರುತ್ತಿದ್ದಂತೆ ಗ್ರಾಮದಲ್ಲಿ ಆತಂತದ ವಾತಾವರಣ ನಿರ್ಮಾಣವಾಗಿತ್ತು. ಸಾಮಾನ್ಯ ವ್ಯಕ್ತಿಗೆ ಕೊರೊನಾ ಬಂದಿದ್ದರೇ ಯಾರಿಗೂ ಅಷ್ಟು ಭಯ ಆಗುತ್ತಿರಲಿಲ್ಲ. ಆದರೆ ರಿಪ್ಪನಪೇಟೆ ಪಟ್ಟಣದ ಸುತ್ತಮುತ್ತಲು ಹತ್ತು ಹಳ್ಳಿಗಳಿಗೆ ಎಲ್ಲರಿಗೂ ಪರಿಚಿತ ಇರುವ ಕಬ್ಬಿನ ವ್ಯಾಪಾರಸ್ಥನಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.
ಜೂ. 18 ರಂದು ಕಬ್ಬು ವ್ಯಾಪಾರಸ್ಥನಿಗೆ ಕೊರೊನಾ ಪಾಸಿಟಿವ್ ಬರುತ್ತಿದ್ದಂತೆ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವುದು ಆತನ ಕುಟುಂಬಸ್ಥರನ್ನು ಈಗಾಗಲೆ ಕ್ವಾರಂಟೈನ್ ಮಾಡಲಾಗಿದೆ. ಈ ನಡುವೆ ಕಬ್ಬು ವ್ಯಾಪಾರಿಯ ಟ್ರಾವಲ್ ಹಿಸ್ಟರಿ ಎಲ್ಲರಿಗೂ ಭಯ ಹುಟ್ಡಿಸುತ್ತಿದೆ. ಕೊರೊನಾ ಪಾಸಿಟಿವ್ ಬರುವ ದಿನವೇ ಆತ ರಿಪ್ಪನಪೇಟೆಯ ತುಂಬೆಲ್ಲಾ ಓಡಾಡಿದ್ದಾನೆ. ಸಂಜೆ ರಿಪ್ಪನ್ ಪೇಟೆಯ ಕೃಷಿ ಪರಿಕರಣಗಳ ಕೇಂದ್ರಗಳಿಗೆ ಭೇಟಿ ನೀಡಿದ್ದಾನೆ. ಬಳಿಕ ಆತನ ಕೃಷಿ ಉಪಕರಣಗಳ ರಿಪೇರಿಗೆಂದು ವಿವಿಧ ರಿಪೇರಿ ಅಂಗಡಿಗಳಿಗೆ ಹೋಗಿ ಬಂದಿದ್ದಾನೆ. ಈ ನಡುವೆ ಹೊಟೇಲ್ ಪರಿಚಯಸ್ಥರಿಗೆಲ್ಲಾ ಭೇಟಿಯಾಗಿದ್ದಾನೆ.
ರಿಪ್ಪನಪೇಟೆಯ ಕೊಬ್ಬರಿ ಎಣ್ಣೆ ಉತ್ಪಾದನಾ ಘಟಕಕ್ಕೂ ಈತ ಹೋಗಿ ಬಂದಿದ್ದಾನೆ. ಈ ಹಿನ್ನಲೆಯಲ್ಲಿ ಘಟಕದಲ್ಲಿರುವವರ ಅನೇಕರು ಈತನ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪಕ್ಕೆ ಬಂದಿದ್ದಾರೆ. ಕೊಬ್ಬರಿ ಎಣ್ಣೆ ಉತ್ಪಾದನಾ ಘಟಕವನ್ನು ಸದ್ಯ ಸೀಲ್ ಡೌನ್ ಮಾಡಲಾಗಿದೆ.
ಇದರೆಲ್ಲ ಆತನ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹೋಗಿದ್ದಾನೆ.. ಊಟ ಮಾಡುವ ಸಮಯ ಪೊಲೀಸರೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನೆಗೆ ಮುಂದೆ ಅಂಬುಲೇನ್ಸ್ ತೆಗೆದುಕೊಂಡು ಬಂದರು. ಕಬ್ಬು ವ್ಯಾಪಾರಿಗೆ ಕೊರೊನಾ ಪಾಸಿಟಿವ್ ಬಂದಿರುವ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ರಾತ್ರಿಯೇ ಶಿವಮೊಗ್ಗದ ಕೋವಿಡ್ ನ ನಿಗದಿತ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
ಕಬ್ಬು ವ್ಯಾಪಾರಸ್ಥರನಿಗೆ ಕೊರೊನಾ ಸೋಂಕು ಬರುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಆತನ ಟ್ರಾವಲ್ ಹಿಸ್ಟರಿ ಕುರಿತು ಮಾಹಿತಿ ಕಲೆಹಾಕಲು ಮುಂದಾದಾಗ ಅವರ ಮಾಹಿತಿ ಭಯ ಮೂಡಿಸಿರುವುದಂತೂ ಸತ್ಯ.
ಜೂ. 15 ರಂದು ಕಬ್ಬು ವ್ಯಾಪಾರಸ್ಥನು ತನ್ನ ಗ್ರಾಮದಲ್ಲಿ ನಡೆದ ಮದುವೆಯ ಉಸ್ತುವಾರಿ ವಹಿಸಿಕೊಂಡಿದ್ದನು. ಮದುವೆಯ ಎಲ್ಲ ಕೆಲಸದಲ್ಲಿ ಈತ ಸಕ್ರಿಯವಾಗಿದ್ದನು. ಮದುವೆಗೆ ಸುತ್ತಮುತ್ತಲಿನ ಹಳ್ಳಿ ಜನರು ಸೇರಿ ಅಂದಾಜು 400 ರಿಂದ 500 ಜನರು ಬಂದು ಹೋಗಿದ್ದಾರೆ. ಹೀಗೆ ಬಂದವರು ಬಹುತೇಕರು ಕಬ್ಬು ವ್ಯಾಪಾರಸ್ಥನನ್ನು ಭೇಟಿಯಾಗಿ ಮಾತನಾಡಿಕೊಂಡು ಹೋಗಿದ್ದಾರೆ. ಮದುವೆಗೆ ಬಂದ ಬಹುತೇಕರಿಗೆ ಈತನೇ ಊಟ ಬಡಿಸಿದ್ದಾನೆ.
ಸದ್ಯ ಈತನಿಗೆ ಕೊರೊನಾ ಬಂದಿರುವುದರಿಂದ ಮದುವೆಗೆ ಯಾರು ಯಾರು ಬಂದಿದ್ದರು. ಅವರೆಲ್ಲರ ಮಾಹಿತಿಯನ್ನು ಆರೋಗ್ಯ ಇಲಾಖೆಯು ಕಲೆಹಾಕುತ್ತಿದೆ.
ಈ ಮದುವೆಯ ಹಿಂದಿನ ಅಂದ್ರೆ ಜೂ. 14 ರಂದು ವ್ಯಾಪಾರಸ್ಥನ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಈ ಹಿನ್ನಲೆಯಲ್ಲಿ ಕಬ್ಬು ವ್ಯಾಪಾರಸ್ಥನು ತೀರ್ಥಹಳ್ಳಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಈತನಿಗೆ ಕೊರೊನಾ ಬಂದ ಹಿನ್ನಲೆಯಲ್ಲಿ ತೀರ್ಥಹಳ್ಳಿಯ ಖಾಸಗಿ ವೈದ್ಯರು ಮತ್ತು ಸಿಬ್ಬಂದಿಗಳನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಕಬ್ಬು ವ್ಯಾಪಾರಸ್ಥನಿಗೆ ಚಿಕಿತ್ಸೆ ಕೊಟ್ಟು ಖಾಸಗಿ ವೈದ್ಯರೂ ಸದ್ಯ ಇಕ್ಕಟ್ಟಿಗೆ ಸಿಲಿಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಆ ದಿನ ಸ್ವಾಬ್ ಟೆಸ್ಟ್ ಮಾಡಿಸಿಕೊಂಡು ಬಂದಿದ್ದನು. ಈ ಹಿನ್ನಲೆಯಲ್ಲಿ ಆವನಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ಆತ ಕೊವಿಡ್ ಟೆಸ್ಟ್ ಗೆ ಒಳಪಡದಿದ್ದರೆ ಇನ್ನೂ ಅನೇಕರು ಈತನ ಸಂಪರ್ಕಕ್ಕೆ ಬರುವ ಸಾಧ್ಯತೆಯಿತ್ತು.
ಈ ನಡುವೆ ಈತ ಭದ್ರಾವತಿ, ದಾವಣಗೆರೆ ಉಡುಪಿ ಮಂಗಳೂರಿಗೆ ಕಬ್ಬಿನ ವ್ಯಾಪಾರಕ್ಕೆಂದು ಹೋಗಿ ಬಂದಿದ್ದಾನೆ. ಹೀಗೆ ಹೊರ ಜಿಲ್ಲೆಗೆ ಹೋದ ಪರಿಣಾಮವೇ ಈತನಿಗೆ ಕೊರೊನಾ ವಕ್ಕರಿಸಿದೆ. ಈ ಕಬ್ಬಿನ ವ್ಯಾಪಾರಕ್ಕೆಂದು ಈತ ಹೊಸನಗರ ತಾಲೂಕಿನ ಹತ್ತಾರು ಹಳ್ಳಿಗಳಿಗೆ ಹೋಗಿ ಬಂದಿದ್ದಾನೆ. ಇದರು ಸದ್ಯ ತಾಲೂಕಿನ ವಿವಿಧ ಗ್ರಾಮಸ್ಥರಿಗೆ ಎದುರಾಗಿರುವ ಆತಂಕ. ಆತನ ಸಂಪರ್ಕಕ್ಕೆ ಬಂದವರೆಲ್ಲರಿಗೂ ಆತಂಕ ಶುರುವಾಗಿದೆ.
ಶಿಕಾರಿಪುರ ಪಟ್ಟಣಕ್ಕೆ ಈತ ತನ್ನ ಸಂಬಂಧಿಕ ಮೃತರ ದಿನದ ಕಾರ್ಯಕ್ಕೆ ಕೂಡಾ ಹೋಗಿ ಬಂದಿದ್ದಾನೆ. ಅಲ್ಲಿಯೂ ಈತನಿಗೆ ಅನೇಕ ಜನರು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿದ್ದಾರೆ. ಕಬ್ಬು ವ್ಯಾಪಾರಿಯೊಬ್ಬನಿಗೆ ಬಂದಿರುವ ಕೊರೊನಾ ಪಾಸಿಟಿವ್ ನಿಂದ ಜಿಲ್ಲೆಯ ಮೂರು ತಾಲೂಕು ಮತ್ತು ಆತ ಹೊರ ಜಿಲ್ಲೆಗೆ ಹೋಗಿ ಭೇಟಿಯಾಗಿ ಬಂದಿರುವ ಜನರಿಗೆ ಕೊರೊನಾ ಸೋಂಕಿನ ಭಯ ಶುರುವಾಗಿದೆ.
ಕಬ್ಬು ವ್ಯಾಪಾರಿಯೊಬ್ಬನು ಯಾವುದೇ ಮುಂಜಾಗ್ರತೆ ವಹಿಸದೇ ಹೊರ ಜಿಲ್ಲೆ ಮತ್ತು ಜಿಲ್ಲೆಯಲ್ಲಿ ಬೇಕಾಬಿಟ್ಟಿ ಓಡಾಡಿದ್ದಾನೆ. ಆರೋಗ್ಯದಲ್ಲಿ ಏರುಪೇರು ಆಗಿದ್ದರೂ ಎಚ್ಚೆತ್ತುಕೊಳ್ಳದೇ ಮದುವೆ, ದಿನದ ಕಾರ್ಯ, ವ್ಯಾಪಾರ ವಹಿವಾಟಿನಲ್ಲಿ ಸಕ್ರಿಯವಾಗಿದ್ದಾನೆ. ಈ ಹಿನ್ನಲೆಯಲ್ಲಿ ಆತನಿಗೆ ಬಂದಿರುವ ಕೊರೊನಾವು ಮತ್ತೆ ನೂರಾರು ಜನರಿಗೆ ಹರಡಿರುವ ಎಲ್ಲ ಮೂನ್ಸೂಚನೆಗಳನ್ನು ನೀಡಿವೆ.ಕಬ್ಬು ವ್ಯಾಪಾರಸ್ಥರನ ವ್ಯಾಪಾರವು ಸದ್ಯ ನೂರಾರು ಜನರನ್ನು ಕೊರೊನಾ ಪೇಚಿಗೆ ಸಿಲುಕಿಸಿಬಿಟ್ಟಿದೆ.