ಶಿವಮೊಗ್ಗ, ಜೂ.21: ಕೊರೊನಾ ಪರೀಕ್ಷೆಗೊಳಗಾದ ವ್ಯಕ್ತಿಗೆ ಸೋಂಕು, ಆತನನ್ನು ಆಸ್ಪತ್ರೆಗೆ ಸೇರಿಸಲು ಪರದಾಡಿದ ವಿಷಯ ಕೊರೊನಾ ಸೊಂಕಿತ ಪರಾರಿಯಾದ ಎಂಬ ಸುಳ್ಳು ಸುದ್ದಿ ಹರಡಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಶಿವಮೊಗ್ಗದ ನಿಗದಿತ ಆಸ್ಪತ್ರೆಯಲ್ಲಿ ನಿನ್ನೆ ಪರೀಕ್ಷೆಗೊಳಗಾದ ವ್ಯಕ್ತಿಗೆ ಸೊಂಕಿರುವುದು ಇಂದು ಬೆಳಿಗ್ಗೆ ಗೊತ್ತಾಗಿದೆ. ಆ ಸಂದರ್ಭದಲ್ಲಿ ಅವರ ಪತ್ತೆಗೆ ಪೋನಾಯಿಸಿದಾಗ ಮೊಬೈಲ್ ಸ್ವಿಚ್ ಆಪ್ ಆಗಿದ್ದು ಆತಂಕ ಮೂಡಿಸಿತ್ತು. ಈ ಬಗ್ಗೆ ಮಾಧ್ಯಮವೊಂದರಲ್ಲಿ ಸೋಂಕಿತ ವ್ಯಕ್ತಿ ಪರಾರಿ ಎಂದು ಸುದ್ದಿ ಬಿತ್ತರವಾದ ಮೇಲೆ ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಿದೆ. ಯಾರೂ ಪರಾರಿಯಾಗಿಲ್ಲ ಎಂದು ತಿಳಿಸಿದೆ. ಶಿವಮೊಗ್ಗದ ವ್ಯಕ್ತಿಯೊಬ್ಬನಿಗೆ ಶೀತ, ಕೆಮ್ಮು, ಜ್ವರ ಹಿನ್ನೆಲೆ ಕಳೆದ 3 ದಿನದ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಸ್ವ್ಯಾಬ್ ಪರೀಕ್ಷೆ ನೀಡಿ ಬಳಿಕ ಮನೆಗೆ ತೆರಳಿದ್ದನು. ಸ್ವ್ಯಾಬ್ ಪರೀಕ್ಷೆಯಲ್ಲಿ ಈತನಿಗೆ ಪಾಸಿಟಿವ್ ಎಂದು ವರದಿ ಬಂದಿದೆ. ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ವ್ಯಕ್ತಿಗಾಗಿ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದ ಹಿನ್ನೆಲೆ ಅಧಿಕಾರಿಗಳಿಗೆ ಆತಂಕ ಮೂಡಿದೆ. ತಕ್ಷಣವೇ ಸೋಂಕಿತನ ಮನೆಯ ವಿಳಾಸ ಪತ್ತೆ ಹಚ್ಚಿ ಮನೆಗೆ ತೆರಳಿದ್ದಾರೆ. ವ್ಯಕ್ತಿ ಮನೆಯಲ್ಲಿಯೇ ಇದ್ದಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಯಲ್ಲಿದ್ದ ಸೋಂಕಿತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತನು ಶಿವಮೊಗ್ಗದ ವಿವೇಕಾನಂದ ಬಡಾವಣೆ ನಿವಾಸಿ ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಜಿಲ್ಲಾಡಳಿತ ಮಾಧ್ಯಮಗಳಿಗೆ ಸರಿಯಾದ ಮಾಹಿತಿ ನೀಡಬೇಕಿತ್ತು. ಈ ತರಹದ ಸುಳ್ಳು ವರದಿಯ ಮಾಹಿತಿಗಳು ಬಿತ್ತರವಾಗುವುದಿಲ್ಲವಲ್ಲವೇ…?
ಸೂರ್ಯಗ್ರಹಣದ ನಡುವೆ… ಕಂಕಣ ಸೂರ್ಯಗ್ರಹಣದ ನಡುವೆ ಕೊರೊನಾ ಪಾಸೀಟೀವ್ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆಂಬ ಸುಳ್ಳು ಮಾಹಿತಿ ಹರಡಿದ ಹಿನ್ನೆಲೆಯಲ್ಲಿ ಒಂದಿಷ್ಟು ಕಳವಳ ಆತಂಕ ವ್ಯಕ್ತವಾಗಿದ್ದಂತೂ ಸತ್ಯ. ಶಿವಮೊಗ್ಗ ನಗರದ ಪ್ರೆಸ್ ಟ್ರಸ್ಟ್ ಎದುರಿಗಿನ ಕಟ್ಟಡದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಸೂರ್ಯ ಗ್ರಹಣವನ್ನ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಕಾರ ಮಂಡಕ್ಕಿ ಮೆಲ್ಲುವ ಅವಕಾಶವೂ ಅಲ್ಲಿತ್ತು. ಉಳಿದಂತೆ ಗ್ರಹಣದ ಸಮಯದಲ್ಲಿ ಶಿವಮೊಗ್ಗ ಖಾಲಿ ಎನಿಸುವಂತ ವಾತಾವರಣ ಎದ್ದು ಕಾಣುತ್ತಿತ್ತು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ವರೆಗೆ ಧೀರ್ಘಕಾಲದ ಸೂರ್ಯಗ್ರಹಣವನ್ನು ಬಹುತೇಕ ಜನ ಮನೆಯಲ್ಲಿಯೇ ವೀಕ್ಷಿಸಿದರು. ಉಳಿದಂತೆ ಇನ್ನಷ್ಟು ಜನ ಟಿವಿಗಳ ಮೊರೆ ಹೋಗಿದ್ದರು. ಸೂರ್ಯ ಒಂದು ಉಂಗುರದಂತೆ ಗೋಚರಿಸುವುದರಿಂದ ಇದನ್ನ ಕಂಕಣ ಸೂರ್ಯಗ್ರಹಣವೆಂದು ಹೇಳಲಾಗುತ್ತಿದೆ. ಇದು ಪಾರ್ಶ್ವದರ್ಶನ ನೀಡಿತೆಂದು ಖಗೋಳ ಶಾಸ್ತ್ರದ ಆಸಕ್ತರು ಹೇಳುತ್ತಾರೆ. ಸೂರ್ಯಗ್ರಹಣದಲ್ಲಿ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಭಾನುವಾರದಂದು ಶಿವಮೊಗ್ಗದಲ್ಲಿ ಮೊದಲೇ ವಾಹನ ಸಂಚಾರ ವಿರಳ ಅದರಲ್ಲೂ ಗ್ರಹಣ ಬಂದಿದ್ದರಿಂದ ರಸ್ತೆಗಳಲ್ಲಿ ಓಡಾಟ ಕಡಿಮೆ ಇತ್ತು. ಮನೆಗಳಲ್ಲಿ ಧ್ಯಾನ, ಜಪತಪಗಳಲ್ಲಿ ಜನರು ನಿರತರಾಗಿದ್ದುದ್ದು ವಿಶೇಷವಾಗಿತ್ತು. ದೇವಸ್ಥಾನಗಳು ಈ ಸಮಯದಲ್ಲಿ ಮುಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ. ಗ್ರಹಣ ಬಿಟ್ಟ ನಂತರ ದೇವರುಗಳಿಗೆ ಮಂತ್ರ ಘೋಷಗಳಿಂದ ಪೂಜೆ ಮಾಡಿ ನಂತರ ದರ್ಶನಕ್ಕೆ ಅವಕಾಶ ನೀಡಿತು.