ಶಿವಮೊಗ್ಗ: ಬಿ.ವೈ. ರಾಘವೇಂದ್ರ ಅವರ ಗೆಲುವು ನಿಶ್ಚಿತ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮತದಾರರು ಬಿಜೆಪಿ ಜೊತೆಗಿದ್ದಾರೆ. ಮೋದಿ ಪ್ರಧಾನಿಯಾಗಬೇಕೆಂಬ ಬಯಕೆ ಎಲ್ಲರಲ್ಲಿಯೂ ಇದೆ. ಇದು ರಾಷ್ಟ್ರದ ವಿಷಯವಾಗಿದೆ. ಹಿಂದುತ್ವದ ತತ್ವವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನ ದುರಾಡಳಿತಕ್ಕೆ ಜನ ರೋಸಿಹೋಗಿದ್ದಾರೆ. ಹಿಂದುಳಿದವರು, ದಲಿತರು, ಕಾರ್ಮಿಕರು ಬಿಜೆಪಿಯ ಪರ ಇದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲುತ್ತದೆ ಎಂದರು.
ಈ ದೇಶವನ್ನು ಹಾಳು ಮಾಡಿದವರು ಕಾಂಗ್ರೆಸ್ ನವರು. ದೇಶ ಒಡೆಯುವ ಮಾತನ್ನೇ ಇವರು ಆಡುತ್ತಿದ್ದಾರೆ. ಇವರ ವೋಟ್ ಬ್ಯಾಂಕ್ ರಾಜಕಾರಣ, ಮಾಫಿಯಾಗಳಿಗೆ ಉತ್ತೇಜನ, ಹೆಚ್ಚಿದ ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ, ತುಘಲಕ್ ರೀತಿಯ ಆಡಳಿತ ಇವೆಲ್ಲವೂ ಬಿಜೆಪಿ ಗೆಲುವಿಗೆ ಅನುಕೂಲವಾಗಿವೆ ಎಂದರು.
ಕಾಂಗ್ರೆಸ್ ಎಷ್ಟರಮಟ್ಟಿಗೆ ಮಾನಸಿಕತೆಯನ್ನು ಹೊರ ಹಾಕುತ್ತಿದೆ ಎಂದರೆ ಈ ದೇಶದಲ್ಲಿ ಆಸ್ತಿಯ ವಾರಸುದಾರ ತೀರಿಕೊಂಡರೆ ಆತನ ಶೇ. 55ರಷ್ಟು ಭಾಗವನ್ನು ಸರ್ಕಾರವೇ ವಶಪಡಿಸಿಕೊಳ್ಳುತ್ತದೆಯಂತೆ. ಇದೆಂತಹ ನೀತಿ? ಗೋವು ಸಾಕುವವರನ್ನು ರಕ್ಷಣೆ ಮಾಡುವದರ ಬದಲು ಗೋವು ಕೊಲ್ಲುವವರನ್ನು ರಕ್ಷಣೆ ಮಾಡುವ ಸರ್ಕಾರವಿದು. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಕೊಡುವ ಭರವಸೆ ಕೊಡುತ್ತಾರೆ ಎಂದರೆ ಇವರ ಓಲೈಕೆ ಎಷ್ಟಿರಬಹುದು? ಒಬ್ಬನೇ ಒಬ್ಬ ರೈತರಿಗೆ ಇವರು ಸಬ್ಸಿಡಿ ನೀಡಲಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ದಲಿತ ಸಮಾಜದ ವಿರೋಧಿಯಾಗಿದೆ. ದಲಿತರಿಗಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿಗಾಗಿ ಬಳಸಿಕೊಂಡಿದೆ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಎದ್ದಿದೆ. ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ರೈತರನ್ನು ಕಡೆಗಣಿಸಿದ ಸರ್ಕಾರವಿದು ಎಂದರು.
ಬಿ.ವೈ. ರಾಘವೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹಿಂದುತ್ವದ ರಕ್ಷಣೆಗೆ ನಿಂತಿದ್ದಾರೆ. ಮೋದಿಯ ಆಡಳಿತದಿಂದ ಈ ದೇಶದಲ್ಲಿ ಬಹುಸಂಖ್ಯಾತರಾದ ಹಿಂದುಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬಿ.ವೈ. ರಾಘವೇಂದ್ರ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹೊಸದಾಗಿ ಮತಪಟ್ಟಿಗೆ ಸೇರಿರುವ ಯುವಕರು, ಯುವತಿಯರು, ವಿವಿಧ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಬೆಂಬಲಿಸುವುದಾಗಿ ಹೇಳಿದರು.