ಹೊಸನಗರ: ’60 ವರ್ಷಗಳಿಂದ ನಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ನಮ್ಮೂರಲ್ಲಿ ಚುನಾವಣಾ ಪ್ರಚಾರಕ್ಕೆ ಪ್ರವೇಶ ನೀಡುವುದಿಲ್ಲ’ ಎಂದು ತಾಲ್ಲೂಕಿನ ಬಿಲಗೋಡಿ, ಬೊಗ್ಗಳ, ಈಚಲಕೊಪ್ಪ ಕಾಪೆರಮನೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದಿನ ಚುನಾವಣೆಗಳಲ್ಲಿಯೂ ನಮ್ಮ ಊರಿನ ಮೂಲ ಸೌಕರ್ಯಗಳ ಈಡೇರಿಕೆ ಮತ್ತು ಬೇಡಿಕೆ ಇಟ್ಟು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾಗ ಸೌಕರ್ಯ ಕಲ್ಪಿಸುವ ಭರವಸೆ ನೀಡಲಾಗಿತ್ತು. ಆದರೆ,

ಭರವಸೆ ಕೇವಲ ಮಾತಲ್ಲೇ ಉಳಿದಿದೆಯೇ ಯಾವುದೇ ಸೌಲಭ್ಯ ನೀಡಿಲ್ಲ. ಈ ಹಿಂದೆ ರಸ್ತೆ ಡಾಂಬರೀಕರಣ ಮಾಡುವುದಾಗಿ ಶಂಕುಸ್ಥಾಪನೆ ಮಾಡಿ ನಂತರ ಬೇರೆಡೆ ಕಾಮಗಾರಿ ಮಾಡಿ ನಮ್ಮ ಊರನ್ನು ನಿರ್ಲಕ್ಷಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿರುವ ಶೇ 90ರಷ್ಟು ಜನರು ಶರಾವತಿ ಸಂತ್ರಸ್ತರಾಗಿದ್ದೇವೆ. ಈ ಕುರಿತು ಏ. 29ರಂದು ಸಾಗರದ ಉಪ ವಿಭಾಗಾಧಿಕಾರಿಗೆ ಮನವಿ ಕೊಟ್ಟು ವಿಷಯವನ್ನು ವಿವರಿಸಿದ್ದೆವು. ನಾವು ಚುನಾವಣೆಯಲ್ಲಿ ಮತದಾನ

ಬಹಿಷ್ಕರಿಸುವ ಕುರಿತು ತಿಳಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಮೂಲ ಸೌಲಭ್ಯ ಕಲ್ಪಿಸುವವರೆಗೂ ಮತದಾನ ಮಾಡುವುದಿಲ್ಲ’ ಎಂದು ಹೇಳಿದರು.
ಕೃಷ್ಣಮೂರ್ತಿ ಈಚಲಕೊಪ್ಪ, ಕಾಫಿ ಮಹೇಶ, ಶೇಖರಪ್ಪ ಸೇರಿ ಗ್ರಾಮಸ್ಥರು ಇದ್ದರು.