ಸುಳ್ಳು ಭರವಸೆಗಳನ್ನೇ ನೀಡುತ್ತಲೆ ೨ ಭಾರಿ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ದೇಶದ ಮತದಾರರಿಗೆ ಸಮಾಜ ವಿಜ್ಞಾನ ಪಾಠ ಮಾಡುವ ಹಂತಕ್ಕೆ ತಲುಪಿದ್ದಾರೆ. ಇವರೊಬ್ಬರು ಪ್ರಧಾನಿಯ ಎಂದು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ನಮಗೆ ಬಂದಿರುವುದು ದುರಂತ.
-ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯಧ್ಯಕ್ಷ, ಶಾಸಕ
ಶಿವಮೊಗ್ಗ, ಮೇ.01:
ಹಲವಾರು ಭರವಸೆಗಳನ್ನು ನೀಡಿ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಟೀಕಿಸುತ್ತಲೇ ಜನ ಸಾಮಾನ್ಯರ ಬದುಕಿನ ಮೇಲೆ ಭಾರಿ ಅವಘಡ ತಂದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಚುನಾವಣೆಯಲ್ಲಿ ಕೇವಲ ಮುಸ್ಲಿಂರ ಬಗ್ಗೆ, ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ, ಮೀಸಲಾತಿ ಬಗ್ಗೆ, ಜಾತಿ-ಧರ್ಮದ ಮದ್ಯೆ ವೈಷಮ್ಯ ಸಾರುತ್ತಾ ಇಲ್ಲವೇ, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾ ಗೆದ್ದು ಏನನ್ನೂ ಮಾಡಲಾಗದೇ ಈಗ ನರೇಂದ್ರ ಮೋದಿಯೇ ಗ್ಯಾರೆಂಟಿ ಎಂದು ಪಕ್ಷಕ್ಕಿಂತ ನಾನೇ ಗ್ರೇಟ್ ಎಂದು ಹೇಳುತ್ತಿರುವುದು ನಾಚೀಕೆಗೇಡಿನ ವಿಚಾರ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ ಭಂಡಾರಿ ಆರೋಪಿಸಿದರು.
ಅವರು ಇಂದು ಮದ್ಯಾಹ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ೨೦೧೪ರ ಚುನಾವಣೆಯಲ್ಲಿ ಕಪ್ಪು ಹಣ ತಂದು ನಿಮಗೆಲ್ಲ ಕೊಡುತ್ತೇನೆ. ಬೆಲೆ ಏರಿಕೆಯನ್ನು ಸಂಪೂರ್ಣ ನಿಯಂತ್ರಿಸುತ್ತೇನೆ ಎಂದು ಅಂದಿದ್ದ ೪೦೦ ರೂ ಸಿಲಿಂಡರ್ ದರವನ್ನು ೧೦೦೦ಕ್ಕೆ ಹೆಚ್ಚಿಸಿದ್ದಲ್ಲದೇ. ೬೦ರೂನಿಂದ ೧೦೦ಕ್ಕೂ ಹೆಚ್ಚು ರೂಪಾಯಿ ಪೆಟ್ರೋಲ್, ಡಾಲರ್ ದರವನ್ನು ೫೫ರಿಂದ ೮೦ಕ್ಕೆ ಹೆಚ್ಚಿಸಿದ ಕುಖ್ಯಾತಿ ಹೊಂದಿದ್ದಾರೆ. ಇದು ಜನರಿಗೆ ಅರ್ಥವಾಗಿದೆ. ೧ ರೂಪಾಯಿ ಹಣವನ್ನು ಯಾರಿಗೂ ನೀಡಲಿಲ್ಲ ಎಂದರು.
ಒಂದೇ ಒಂದು ಸಾಧನೆ ಮಾಡದೇ ೫ ವರ್ಷ ಅಧಿಕಾರ ಮುಗಿಸಿ, ೨೦೧೯ರಲ್ಲಿ ಪುಲ್ವಾಮ ದಾಳಿಯನ್ನು ಮುಂದಿಟ್ಟುಕೊಂಡು ೪೦ ವೀರಯೋಧರ ನೆನಪಿನಲ್ಲಿ ದೇಶದ ರಕ್ಷಣೆಗೆ ಬಿಜೆಪಿ ಬರಬೇಕೆಂದು ಮತ್ತೊಮ್ಮೇ ಗೆದ್ದದ್ದು ಅವರ ಸಾಧನೆ. ೧೦ ವರ್ಷಗಳ ಕಾಲ ಏನನ್ನೂ ಮಾಡಲಿಲ್ಲ. ಪುಲ್ವಾಮ ದಾಳಿಯ ಬಗ್ಗೆ ಒಂದೇ ಒಂದು ಚಿಕ್ಕ ತನಿಖೆ ನಡೆಯಲಿಲ್ಲ. ಆಗ ಹೇಳಿದ್ದ ಭಾಷಣದ ಒಂದೇ ಒಂದು ಬೇಳೆಕಾಳು ಬೆಯಲ್ಲಿಲ್ಲ. ಈಗ ಎಲ್ಲವನ್ನೂ ಬಿಟ್ಟು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಾನೇ ಗ್ಯಾರಂಟಿ ಎಂದು ಕಾಂಗ್ರೆಸ್ನ ಗ್ಯಾರಂಟಿ ಹೆಸರನ್ನು ಕದ್ದು ಸಬ್ಕಾ ದೋಖಾ ಮಾಡುತ್ತಿದ್ದಾರೆ ಎಂದರು.
ಭ್ರಷ್ಟ ಅಧಿಕಾರಿಗಳನ್ನು ನಿರ್ನಾಮ ಮಾಡುತ್ತೇನೆ ಎಂದು ಕಾಂಗ್ರೆಸ್ ಪಕ್ಷ ಕಿತ್ತು ಹಾಕಿದ್ದ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ ಈ ಮೋದಿ ೨೦೧೪ರ ತನಕ ಇದ್ದ ೫೫ ಲಕ್ಷ ಕೋಟಿ ಸಾವನ್ನು ಕೇಲವ ಹತ್ತು ವರ್ಷದಲ್ಲಿ ೧೨೦ ಕೋಟಿ ಹೆಚ್ಚಿಸಿರುವುದು ಸಾಧನೆಯೇ..? ಎಂದು ಪ್ರಶ್ನಿಸಿದ ಅವರು, ಇಷ್ಟೊಂದು ಸಾಲ ಮಾಡಿದರೆ ದೇಶ ಹೇಗೆ ಪ್ರಗತಿಯಾಗಿದೆ. ರಾಷ್ಟ್ರೀಕರಣವಾಗಿದ್ದ ಕಂಪನಿಗಳನ್ನು ಖಾಸಗಿಕರಣ ಮಾಡುತ್ತಾ, ಬಡವರಿಗೆ, ಎಸ್ಸಿ, ಎಸ್ಟಿ, ಓಬಿಸಿ ಅವರಿಗೆ ಕೆಲಸವನ್ನು ಕೊಡಬಾರದೆಂದು ಶ್ರೀಮಂತರನ್ನಷ್ಟೇ ಸಾಕುವ ಪಕ್ಷವಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ನೀಡಿದ ೫ ಗ್ಯಾರಂಟಿಗಳು ಬಡ ಜನಕ್ಕೆ ತಲುಪುತ್ತಿದ್ದು, ದೇಶವನ್ನು ಪಾದಯಾತ್ರೆ ಮೂಲಕ ಸುತ್ತಿ ಬಡವರ, ನೊಂದವರ ಅಳಲನ್ನು ಆಲಿಸಿ ಕಾಂಗ್ರೆಸ್ ಮುಖಡರಾದ ರಾಹುಲ್ಗಾಂಧಿ ಅವರು ೫ ಗ್ಯಾರಂಟಿಗಳನ್ನು ನೀಡಿದ್ದಾರೆ. ಬಡಮಹಿಳೆಗೆ ೧ ಲಕ್ಷ, ವಿದ್ಯಾನಿಧಿಗೆ ೧ ಲಕ್ಷ ವೈದ್ಯಕೀಯ ತಪಾಸಣೆ, ರೈತರಿಗೆ ಬೆಂಬಲ ಬೆಲೆ, ಶ್ರಮಿಕರಿಗೆ ಕನಿಷ್ಠ ವೇತನದಂತಹ ನೊಂದವರಿಗೆ ನೆರಳಾಗುವ ಗ್ಯಾರಂಟಿಗಳನ್ನು ನೀಡಿದ್ದಾರೆ ಇದು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ವೇದಿಕೆಯಾಗಿದೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ನಡೆದಾಗ ಕರ್ನಾಟಕ ರಾಜ್ಯದಲ್ಲಿ ಶೇ.೪೩ಕ್ಕಿಂತಲೂ ಹೆಚ್ಚು ಕಾಂಗ್ರೆಸ್ ಪಕ್ಷ ಮತ ಪಡೆದಿತ್ತು. ಆ ಸಾರಾಸರಿ ಆಧಾರದಲ್ಲಿ ರಾಜ್ಯದಲ್ಲಿ ೧೮ ಸ್ಥಾನಗಳನ್ನು ಕಾಂಗ್ರೆಸ್ ಅತ್ಯಂತ ಸುಲಭವಾಗಿ ಗೆಲ್ಲುತ್ತದೆ. ಗ್ಯಾರಂಟಿ ಯೋಜನೆಗಳು ೫ ಕೋಟಿ ಜನರಿಗೆ ತಲುಪಿದ್ದು, ೧೫ ರಿಂದ ೨೦ ರಷ್ಟು ಮತಗಳು ಹೆಚ್ಚಾಗಲಿವೆ. ಕನಿಷ್ಠ ೫ರಿಂದ ೮ರಷ್ಟು ಮತಗಳು ಗ್ಯಾರಂಟಿಗಳ ಮೂಲಕ ಬಂದರೆ ಕಾಂಗ್ರೆಸ್ ರಾಜ್ಯದ ೨೮ ಕಡೆ ಗೆಲ್ಲುತ್ತದೆ ಎಂದರು.
ಬಿಜೆಪಿಗೆ ಒಬ್ಬನೆ ನಾಯಕ, ಈಗ ಎಲ್ಲವನ್ನೂ ಬಿಟ್ಟು ಪಕ್ಷದ ಹೆಸರನ್ನು ಹೇಳದೇ ಮೋದಿ ಗ್ಯಾರಂಟಿ ಎಂದು ಅಬ್ಬರಿಸುತ್ತಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. ಮೋದಿ ಆ ಪಕ್ಷದಲ್ಲಿ ಸರ್ವಾಧಿಕಾರಿಯಾಗಿದ್ದಾರೆ. ಸುಳ್ಳು ಹೇಳುತ್ತಲೇ ಮತದಾರರನ್ನು ಎಷ್ಟು ದಿನ ವಂಚಿಸಲು ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಹರೀಶ್ ಕುಮಾರ್, ಪ್ರಮುಖರಾದ ಪ್ರಧಾನ್ ಆಲಿ, ನಂದಕುಮಾರ್, ಲಕ್ಷ್ಮೀ ವೆಂಕಟೇಶ್, ಎನ್.ರಮೇಶ್, ಶಿವಾನಂದ್, ಹಬೀಬುಲ್ಲಾ, ವಿಜಯ್ಕುಮಾರ್, ಮೂರ್ತಿ, ದೇವಿಕುಮಾರ್, ಈಶ್ವರ್ ಹಾಗೂ ಇತರರಿದ್ದರು.