ಸಾಗರ : ೪೦೦ ಸೀ ಟ್ ಗೆಲ್ಲುತ್ತೇವೆ ಎನ್ನುತ್ತಿರುವ ನರೇಂದ್ರ ಮೋದಿಯವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಯಾಕೆ. ಬಿಜೆಪಿಯವರಿಗೆ ಸೋಲಿನ ಭೀತಿ ಇರುವುದರಿಂದಲೇ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದರು.
ಇಲ್ಲಿನ ಮಲೆನಾಡುಸಿರಿ ಸಭಾಂಗಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮೊದಲ ಸುತ್ತು ಮತ್ತು ಎರಡನೇ ಸುತ್ತಿನ ಮತದಾನ ಮುಗಿದ ನಂತರ ನರೇಂದ್ರ ಮೋದಿಯವರಿಗೆ ಸೋಲಿನ ಭೀತಿ ಹೆಚ್ಚಾಗಿದ್ದು, ಭಾವನಾತ್ಮಕವಾಗಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಹತ್ತು ವರ್ಷಗಳ ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ಇರಿಸಿ ಮತ ಕೇಳಬೇಕಾದ ಪ್ರಧಾನಿಯವರು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ತೆಗಳುವುದೇ ಚುನಾವಣಾ ಭಾಷಣವಾಗಿಸಿಕೊಂಡಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ. ೪೩ರಷ್ಟು ಮತದ ಮೂಲಕ ೧೩೫ ಸ್ಥಾನವನ್ನು ಕಾಂಗ್ರೇಸ್ ಪಕ್ಷ ಗೆದ್ದು ಕೊಂಡಿತ್ತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮತದಾರರು ಇನ್ನಷ್ಟು ಪ್ರಭಾವಿತರಾಗಿದ್ದು ೨೪ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ನಿಚ್ಚಳ ಬಹುಮತ ಬರುತ್ತದೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಈ ಬಾರಿ ಕೇಂದ್ರದಲ್ಲಿ ಎನ್.ಡಿ.ಎ. ಮೈತ್ರಿಕೂಟ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಇಂಡಿಯಾ ಒಕ್ಕೂಟ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಐದು ಗ್ಯಾರಂಟಿಗಳು ಶೇ. ೯೯ರಷ್ಟು ಜನರನ್ನು ತಲುಪಿದೆ. ರಾಜ್ಯದ ೧.೬೭ಕೋಟಿ ಜನರು ವಿವಿಧ ಯೋಜನೆ ಪಡೆದುಕೊಳ್ಳುತ್ತಿದ್ದು ಸುಮಾರು ೫ ಕೋಟಿ ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನಮ್ಮ ಕಾರ್ಯಕರ್ತರು ಮತಯಾಚನೆಗೆ ಹೋದ ಸಂದರ್ಭದಲ್ಲಿ ಮತದಾರರು ಅತ್ಯಂತ ಸಂತೋಷದಿಂದ ಕಾಂಗ್ರೇಸ್ ಸರ್ಕಾರವನ್ನು ಹೊಗಳುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಅಭಿಪ್ರಾಯಿಸುವಂತೆ ರಾಜ್ಯದಲ್ಲಿ ಯಾರ ಅಲೆಯೂ ಇಲ್ಲ. ಸದ್ಯ ಇರುವುದು ಕಾಂಗ್ರೇಸ್ ಅಲೆ ಮಾತ್ರ. ಶಿವಮೊಗ್ಗ ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೇಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾನೂರು, ಉರುಳುಗಲ್ಲು, ಮೆಗ್ಗಾನೆ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಿ ಎಂದು ನಾನು ಪತ್ರ ನೀಡಿಲ್ಲ. ಅವರಿಗೆ ಅಲ್ಲಿಯೆ ಬಾಳಿ ಬದುಕಲು ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಇಂಧನ ಸಚಿವರು, ಅರಣ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಕುಟುಂಬಗಳು ತಾವು ಹೊರಗೆ ಹೋಗುತ್ತೇವೆ ಎಂದು ನನ್ನ ಬಳಿ ಮನವಿ ಮಾಡಿದಾಗಲೂ ನಾನು ಇಲ್ಲಿಯೆ ಬದುಕಲು ಬೇಕಾದ ಸೌಲಭ್ಯ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದೇನೆ. ಬಿಜೆಪಿಯವರು ಇದನ್ನು ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ. ನಾನು ಯಾರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರಸ್ತೆ, ವಿದ್ಯುತ್ ಇನ್ನಿತರೆ ಮೂಲಭೂತ ಸೌಲಭ್ಯ ಕೊಡಿಸುತ್ತೇನೆ ಎಂದು ಹೇಳಿದರು.
ಬಾಕ್ಸ್ : ಪ್ರಜ್ವಲ್ ರೇವಣ್ಣರದ್ದು ಎನ್ನುವ ಪೆನ್ಡ್ರೈವ್ ವಿಷಯ ಕುರಿತು ರಾಜ್ಯ ಸರ್ಕಾರ ಎಸ್.ಐ.ಟಿ. ತನಿಖೆಗೆ ಆದೇಶ ಮಾಡಿದೆ. ಕುಂದಾಪುರದಲ್ಲಿ ನೇಹಾ ಹಿರೇಮಠ್ ಕೊಲೆಯಾದ ತಕ್ಷಣ ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಸಿಬಿಐಗೆ ಒಪ್ಪಿಸಿ ಎಂದು ಕೂಗಿದ್ದ ಬಿಜೆಪಿಯವರು ಈಗ ಮೌನವಾಗಿದ್ದಾರೆ. ಬೇಟಿ ಬಚಾವೋ ಎಂದು ಹೇಳುವ ಬಿಜೆಪಿಯವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇದೇ ಘಟನೆ ಅನ್ಯಕೋಮಿನವರು ಮಾಡಿದ್ದರೆ ಬಿಜೆಪಿ ಇಷ್ಟು ಹೊತ್ತಿಗೆ ದೊಡ್ಡ ಪ್ರತಿಭಟನೆ ಮಾಡುತಿತ್ತು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಎಚ್.ಎಂ.ರವಿಕುಮಾರ್, ಐ.ಎನ್.ಸುರೇಶಬಾಬು, ಕೆ.ಹೊಳೆಯಪ್ಪ ಹಾಜರಿದ್ದರು.