ಶಿವಮೊಗ್ಗ, ಏ.28:
ಶಿವಮೊಗ್ಗ ಜಿಲ್ಲೆಯಲ್ಲಿ
ಒಂದು ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ತಮಿಳು ಸಮಾಜವು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರನ್ನು ಈ ಬಾರಿಯೂ ಬೆಂಬಲಿಸಲಿದ್ದಾರೆ ಎಂದು ತಮಿಳು ಸಮಾಜದ ಪ್ರಮುಖರು ಹಾಗೂ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಮ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪಿ. ಸಂಪತ್, ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿ. ರಾಜಶೇಖರ್, ತಮಿಳು ಯುವಕರ ಸಂಘದ ಅಧ್ಯಕ್ಷ ಎಂ.ಪಿ. ಗಣೇಶ್ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ತಮಿಳು ಬಾಂಧವರ ವೇದಿಕೆ ಮೂಲಕ ಇಲ್ಲಿಯವರೆಗೆ ತಮಿಳು ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾದ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಋಣ ತೀರಿಸಲು ಮತ್ತು ತಮಿಳು ಸಮಾಜದ ಏಳಿಗೆಗೆ ಶ್ರಮಿಸಿದ ಬಿ. ವೈ. ರಾಘವೇಂದ್ರ ಅವರ ವಿಶ್ವಾಸಕ್ಕೆ ಸಮಾಜದ ಎಲ್ಲಾ ಪ್ರಮುಖರು ಈ ಬಾರಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಿಶ್ವಕವಿ ತಿರುವಾಳ್ಳುವರ್ ಪ್ರತಿಮೆ ಪ್ರತಿಷ್ಠಾಪಿಸುವ ಜೊತೆಗೆ ತಮಿಳುನಾಡಿನಲ್ಲಿ ಸರ್ವಜ್ಞರ ಪ್ರತಿಮೆ ಸ್ಥಾಪಿಸಿ ಕನ್ನಡ ಹಾಗೂ ತಮಿಳು ಬಾಂಧವರ ಹೃದಯ ಗೆದ್ದಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. ಎಂ.ಪಿ. ಸಂಪತ್ ಅವರು ಮಾತನಾಡುತ್ತಾ, ಶಿವಮೊಗ್ಗ ಜೆ ಎಚ್ ಪಟೇಲ್ ಬಡಾವಣೆಯಲ್ಲಿರುವ ಸುಸಜ್ಜಿತ ತಮಿಳ್ ತಾಯಿ ಸಮುದಾಯ ಭವನ, ಹಾಗೂ ಜಿಲ್ಲೆಯ ವಿವಿಧ ಅಯ್ಯಪ್ಪ ಸ್ವಾಮಿ ದೇವಾಲಯಗಳಿಗೆ ಮಾರಿಯಮ್ಮ ದೇವಾಲಯಗಳಿಗೆ ಸಾಕಷ್ಟು ನೆರವು ನೀಡಿರುವ ಯಡಿಯೂರಪ್ಪ ಹಾಗೂ ಭಾರತೀಯ ಜನತಾ ಪಕ್ಷವನ್ನು ನಾವು ಬೆಂಬಲಿಸಿದ್ದೇವೆ ಎಂದರು.
ಗುಡ್ಡೆಕಲ್ ಶ್ರೀ ಬಾಲಸುಬ್ರಮಣ್ಯ ದೇವಾಲಯಕ್ಕೆ 3.5 ಎಕರೆ ಜಾಗ ಮಂಜೂರು ಮಾಡಿ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಕಾರಣಕರ್ತರಾದ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರನ್ನು ವಿನಮ್ರವಾಗಿ ಸ್ಮರಿಸುತ್ತಾ ಅವರ ಸಹಕಾರವನ್ನು ನೆನೆಯುವ ಜೊತೆಗೆ ಮುಂದಿನ ಇನ್ನಷ್ಟು ಸಮಾಜದ ಅಭಿವೃದ್ಧಿಯ ಬೇಡಿಕೆಗಳನ್ನು ಈಡೇರಿಸುವ ಭರವಸೆಯೊಂದಿಗೆ ಈ ಬಾರಿ ರಾಘವೇಂದ್ರ ಅವರಿಗೆ ತಮಿಳು ಸಮಾಜ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಡಿ ರಾಜಶೇಖರ್ ತಿಳಿಸಿದರು.
ಭಾರತೀಯ ಜನತಾ ಪಕ್ಷದಿಂದ ಪಕ್ಷೇತರವಾಗಿ ಸ್ಪರ್ಧಿಸಿರುವ ಕೆಎಸ್ ಈಶ್ವರಪ್ಪ ಅವರಿಗೆ ತಮಿಳು ಸಮಾಜದ ಮತ ಕೇಳುವ ಯಾವುದೇ ಹಕ್ಕಿಲ್ಲ. ಹಿಂದೆ ನಾನು ಸಮಾಜದ ಅಧ್ಯಕ್ಷನಾಗಿದ್ದಾಗ ಜಿಲ್ಲಾಮಟ್ಟದ ಸಮಾವೇಶ ನಡೆಸಲು ಮುಂದಾಗಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಇದೇ ಈಶ್ವರಪ್ಪ. ಅಂತೆಯೇ ಗುಡ್ಡೇಕಲ್ ಜಾಗ ತಮಿಳು ಸಮಾಜಕ್ಕೆ ನೀಡಲು ವಿರೋಧಿಸಿದ್ದು ಇದೆ ಈಶ್ವರಪ್ಪ ಎಂದ ಅವರು ಸಮಾಜದ ಹಿತವನ್ನು ಕಾಪಾಡದ ಈಶ್ವರಪ್ಪ ಹೇಗೆ ತಾನೇ ತಮಿಳರ ಮತ ಪಡೆಯಲು ಕೇಳಲು ಸಾಧ್ಯ? ಅವರಿಗೆ ನೈತಿಕ ಹಕ್ಕಿಲ್ಲ ಎಂದರು.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಭೂಪಾಲ್ ಎನ್ನುವ ವ್ಯಕ್ತಿ ಯಾರಿಗೆ ತಾನೇ ಗೊತ್ತು? ಎಷ್ಟು ದಿನ ಇಂತಹ ಡೀಲ್ ನಡೆಯುತ್ತದೆ. ಆರು ಕೊಟ್ಟರೆ ಅತ್ತೆ ಕಡೆ, 3 ಕೊಟ್ಟರೆ ಸೊಸೆ ಕಡೆ ಎಂಬುದು ಹೇಗಾಗುತ್ತದೆ ಎಂದು ರಾಜಶೇಖರ ಪ್ರಶ್ನಿಸಿದರು.
ಕನಿಷ್ಠ ಮೂರು ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆಲುವು ಖಚಿತ: ಎಂ.ಪಿ. ಗಣೇಶ್
ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ತಮಿಳು ಸಮಾಜ ಬಾಂಧವರ ಮತ ಕೇಳುವ ಯಾವುದೇ ನೈತಿಕ ಹಕ್ಕಿಲ್ಲ. ತಮ್ಮ ಸ್ವಾರ್ಥಕ್ಕೋಸ್ಕರ ಮಗನ ಟಿಕೆಟ್ ಗೋಸ್ಕರ ಪಕ್ಷೇತರವಾಗಿ ನಿಂತಿದ್ದಾರೆ. ಅಂತೆಯೇ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಓಂ ಶಕ್ತಿ ಪ್ರವಾಸವನ್ನೇ ರದ್ದು ಮಾಡಿದ್ದೇಕೆ? ಸಂಸದ ಬಿ ವೈ ರಾಘವೇಂದ್ರ ಅವರು ಆ ಕೆಲಸ ಓಂ ಶಕ್ತಿ ಪ್ರವಾಸಿ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ ಭಕ್ತಾದಿಗಳಿಗೆ ಓಂ ಶಕ್ತಿ ಯಾತ್ರೆಗೆ ಕಳಿಸಿಕೊಟ್ಟದ್ದು ಗೊತ್ತಿಲ್ಲವೇ? ಈಶ್ವರಪ್ಪ ಅವರು ನಮ್ಮ ಸಮಾಜಕ್ಕೆ ಅವರು ಏನನ್ನು ಕೊಡುಗೆಯಾಗಿ ನೀಡಿದ್ದಾರೆ. ನಾವು ನಮ್ಮ ಸಮಾಜದ ಹಿತ ಬಯಸುವ ರಾಘವೇಂದ್ರ ಅವರನ್ನು ಬೆಂಬಲಿಸುತ್ತೇವೆ. ಪ್ರತಿ ಬೀದಿ ಬೀದಿಗಳಲ್ಲಿ ಜನರಿಗೆ ಸಮಾಜ ಬಾಂಧವರಿಗೆ ರಾಘವೇಂದ್ರ ಹಾಗೂ ಯಡಿಯೂರಪ್ಪ ಅವರ ಸಾಧನೆಯ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಮತ ಕೇಳುತ್ತೇವೆ. ಕನಿಷ್ಠ ಮೂರು ಲಕ್ಷ ಮತಗಳ ಅಂತರದಿಂದ ರಾಘವೇಂದ್ರ ಗೆದ್ದೇ ಗೆಲ್ಲುತ್ತಾರೆ.
ಎಂಪಿ ಗಣೇಶ್, ತಮಿಳು ಯುವಕರ ಸಂಘದ ಅಧ್ಯಕ್ಷರು, ಶಿವಮೊಗ್ಗ.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.