ಶಿವಮೊಗ್ಗ,ಏ.13: ಚುನಾವಣಾ ಅಖಾಡಾ ರೆಡಿಯಾಗಿದೆ. ಏ.18ರಂದು ಬೆಳಿಗ್ಗೆ 9ಗಂಟೆಗೆ ರಾಮಣ್ಣಶ್ರೇಷ್ಟಿ ಪಾರ್ಕ್ನಿಂದ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮಾಂತರ ಕ್ಷೇತ್ರದಲ್ಲಿ ನೆನ್ನೆ ನಡೆದ ಸಭೆ ಅಭೂತಪೂರ್ವ ಯಶಸ್ವಿಯಾಗಿದೆ. ನಾಳೆ ಸಂಜೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಶಿವಮೊಗ್ಗ ಮೂಲದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಬೃಹತ್ ಸಮಾವೇಶ ನಡೆಯಲಿದೆ ಎಂದರು.
ಮೋದಿ ಆಡಳಿತದಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡುವವರಿಗೆ ತಕ್ಕ ಉತ್ತರ ನೀಡಲಾಗಿದೆ. ನಮ್ಮ ಮನೆಯ ಪಕ್ಕದ ತೀರ್ಥಹಳ್ಳಿಯಲ್ಲಿಯೇ ಭಯೋತ್ಪಾದಕರು ಬಾಂಬ್ ತಯಾರಿಸಿದ್ದರು. ಅವರನ್ನು ಮೋದಿ ಸರ್ಕಾರ ಎಡೆಮುರಿ ಕಟ್ಟಿದೆ. ಕೆಲವರು ಹಗುರವಾಗಿ ನಮ್ಮ ಕುಟುಂಬದ ಬಗ್ಗೆ ಮತ್ತು ಮೋದಿ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದು, ಅವರಿಗೆ ಮತದಾರ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದರು.
ಭಾರತ್ ಅಕ್ಕಿ ವಿತರಣೆಯನ್ನು ನಿಲ್ಲಿಸುವ ಪ್ರಯತ್ನವು ನಡೆಯಿತು. ಚುನಾವಣಾ ಆಯೋಗ ಮೋದಿ ಭಾವಚಿತ್ರ ಅಲ್ಲದೇ ಅಕ್ಕಿ ವಿತರಣೆ ಮಾಡುವಂತೆ ತಿಳಿಸಿದ್ದು, ಆ ಕಾರ್ಯವು ಮುಂದುವರೆದಿದ್ದು, ಅಕ್ಕಿ ವಿತರಣೆಗೆ ಯಾವುದೇ ಅಡ್ಡಿಯಿಲ್ಲ ಎಂದರು.
ಹಾದಿಬೀದಿಲಿ ದಾಖಲೆ ಇಲ್ಲದೆ ಸುಳ್ಳು ಸೃಷ್ಟಿ ಮಾಡಿ ಮಾತನಾಡುವವರಿಗೆ ನಾನು ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ನನ್ನ ಸಂಪರ್ಕ ನಾನು ಮಾಡಿದ ಅಭಿವೃದ್ಧಿ ಕಾರ್ಯ ನನ್ನ ಬೆನ್ನ ಹಿಂದೆ ನಿಂತಿದೆ. ಬಿಜೆಪಿಯ ಒಂದೇ ಒಂದು ವೋಟು ಬೇರೆ ಕಡೆ ಹೋಗುವುದಿಲ್ಲ. ಹಿಂದುತ್ವ ಮತ್ತು ಮೋದಿ ಹೆಸರಿನಲ್ಲಿ ಎಲ್ಲರು ವೋಟು ಕೇಳಲು ಆಗುವುದಿಲ್ಲ. ಮತದಾರರು ಪ್ರಜ್ಞಾವಂತರಿದ್ದಾರೆ. ಸಾಗರದಲ್ಲಿ ನಡೆದ ಈಡಿಗರ ಸಮಾವೇಶ ಮತ್ತು ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರಧಾನಿ ಸಮಾವೇಶ ವಿರೋಧಿಗಳಿಗೆ ಉತ್ತರ ನೀಡಿದೆ. ಬಾಯಲ್ಲಿ ಸುಳ್ಳು ಹೇಳಿ ದೈಹಿಕವಾಗಿ ಜಗಳವಾಡುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಇಲ್ಲ. ಮೋದಿಜೀಗಿಂತ ರಾಷ್ಟ್ರ ಭಕ್ತರು ಬೇರೆ ಬೇಕೆ ಎಂದರು.
ಹಿಂದುತ್ವದ ಮೂಲಕ ರಾಮಮಂದಿರ ನಿರ್ಮಾಣವಾಯಿತು. ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಯಶಸ್ವಿಯಾಯಿತು. ಮನೆ ಮನೆಯಿಂದ ಇಟ್ಟಿಗೆ ಪಡೆದು ಎಲ್ಲ ಭಾರತೀಯರ ಭಾವನೆಯನ್ನು ಒಗ್ಗೂಡಿಸಿ ಮಂದಿರ ಮತ್ತು ಸರ್ಧಾರ್ ವಲಬಾಯ್ ಪಟೇಲ್ ಪ್ರತಿಮೆ ನಿರ್ಮಾಣವಾಯಿತು. ಬಿಜೆಪಿ ಭಾರತವನ್ನು ಒಗ್ಗೂಡಿಸುತ್ತದೆ. ಆದರೆ, ಕೆಲವು ಪಕ್ಷದಗಳು ಚುನಾವಣೆಗಾಗಿ ಭಾವನೆಗಳ ದುರುಪಯೋಗ ಮಾಡುತ್ತವೆ. ನಮ್ಮ ಸ್ವಾರ್ಥಕ್ಕಾಗಿ ಬೇರೆಯವರನ್ನು ಬೈಯ್ಯುವುದರಲ್ಲಿ ಅರ್ಥವಿಲ್ಲ. ಏ.19ರಂದು ಶಾಕಿಂಗ್ ಸುದ್ದಿ ಇದೆ. ತಾಳ್ಮೆಯಿಂದ ಕಾಯೋಣ, ಮತದಾರ ಮೇ 7ರಂದು ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಾನೆ ಎಂದರು.