ಶಿವಮೊಗ್ಗ, ಏ.13:
ರಾಘವೇಂದ್ರ ಸೋಲಬೇಕು, ವಿಜಯೇಂದ್ರ ಇಳಿಬೇಕು, ಹಿಂದುತ್ವ ಗೆಲ್ಲಬೇಕು ಎಂಬುದೇ ನನ್ನ ಗುರಿ ಎಂದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಂಡಾಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಅವರು ಇಂದಿಲ್ಲಿ ತಿಳಿಸಿದರು.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನಿನ್ನೆ ಅಪಾರ ಜನಸ್ತೋಮದೊಂದಿಗೆ ನಾಮಪತ್ರ ಸಲ್ಲಿಸಿದ್ದು, ಇಂದು ಬೆಳಗ್ಗೆ ಈ ಸಂಬಂಧ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಬಡ, ದೀನದಲಿತ, ನೊಂದ ಮತದಾರರು ಯುವಶಕ್ತಿ,ನಾರಿ ಶಕ್ತಿ, ರೈತ ಶಕ್ತಿ ರೂಪದಲ್ಲಿ ಬಂದು ನನಗೆ ಬೆಂಬಲಿಸಿ ಸಹಕರಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.
ಚುನಾವಣೆಗೆ ನಾನು ಸ್ಪರ್ಧಿಸುವುದು ಖಚಿತ ಯಾವುದೇ ಕಾರಣಕ್ಕೂ ಹಿಂದೆ ಪಡೆಯುವುದಿಲ್ಲ ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಅವರನ್ನು ಸೋಲಿಸಬೇಕು. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು. ಮತ್ತೆ ಹಿಂದುತ್ವ ಮೂಲಕ ನಾನು ಗೆದ್ದು ಮೋದಿ ಅವರ ಬಳಿ ಹೋಗಿ ಅವರನ್ನು ಪ್ರಧಾನಿಯನ್ನಾಗಿಸಬೇಕು ಎಂದು ಹೇಳಿದರು.
ಈಗಾಗಲೇ ನಾನು ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವ ಚಿಂತನೆ ಇಲ್ಲ. ನಿಂತೇ ನಿಲ್ಲುತ್ತೇನೆ ಎಂದರು.
ಸಚಿವ ಮಧು ಬಂಗಾರಪ್ಪ ಅವರು ನನಗೆ ಬಿಜೆಪಿ ಬಿ ಟೀಮ್ ಎಂದಿದ್ದಾರೆ ನಂದೇ ನಿಜವಾದ ಬಿಜೆಪಿ. ಇವರ ಹಾಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ. ಪ್ರಾಮಾಣಿಕವಾಗಿ ಹೇಳಲಿ, ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು. ಗೀತಾ ಶಿವರಾಜಕುಮಾರ್ ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷದ ಸಾಕಷ್ಟು ಪ್ರಮುಖರು ನನ್ನ ಜೊತೆ ಇದ್ದಾರೆ, ಬೇಕಾದ ಲಿಸ್ಟ್ ನೀಡುತ್ತೇನೆ ಬನ್ನಿ ನೋಡೋಣ ಎಂದರು.
ಈ ಅಪ್ಪ-ಮಕ್ಕಳು ಕರ್ನಾಟಕ ಬಿಜೆಪಿಯನ್ನು ಹಿಂದುತ್ವದಿಂದ ದೂರಸರಿಸುತ್ತಿದ್ದಾರೆ. ನಾನು 40 ವರ್ಷದಿಂದ ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆಗಿ ಕೆಲಸ ಮಾಡಿದ್ದೇನೆ. ಯಾರ ಬಗ್ಗೆ ಜನರ ಅದರಲ್ಲೂ ಮತದಾರರ ಮನದಲ್ಲಿ ಏನಿದೆ ಎಂಬುದನ್ನು ಸದ್ಯದಲ್ಲೇ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತೋರಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸುವರ್ಣ ಶಂಕರ್, ವಿಶ್ವಾಸ್, ಬಾಲು, ಮಹಾಲಿಂಗ ಶಾಸ್ತ್ರಿ, ಲತಾ ಗಣೇಶ್, ಪ್ರಭಾಕರ್, ಮೋಹನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.