ಶಿವಮೊಗ್ಗ,ಏ.12: ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಇಂದು ಸಾವಿರಾರು ಬೆಂಬಲಿಗರೊಂದಿಗೆ ಮರವಣಿಗೆಯಲ್ಲಿ ಆಗಮಿಸಿ ಬಳಿಕ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿ, ಕಣದಲ್ಲಿ ಉಳಿಯುವ ಮೂಲಕ ಬಂಡಾಯದ ಬಾವುಟ ಅಧಿಕೃತವಾಗಿ ಆರಿಸಿದ್ದಾರೆ.
ರಾಮಣ್ಣಶ್ರೇಷ್ಟಿ ಪಾರ್ಕ್ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಾಮಪತ್ರ ಸಲ್ಲಿಕೆ ಮೆರವಣಿಗೆ ಆರಂಭವಾಯಿತು. ಕೇಸರಿ ಬಾವುಟ, ರೂಮಾಲು ಧರಿಸಿದ ಬೆಂಬಲಿಗರು ಭಾಗವಹಿಸಿದ್ದರು. ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಗಾಂಧಿಬಜಾರ್ ಮೂಲಕ ಸಾಗಿದ ಮೆರವಣಿಗೆ ಎ.ಎ.ಸರ್ಕಲ್, ನೆಹರು ರಸ್ತೆಯ ಮೂಲಕ ಗೋಪಿಸರ್ಕಲ್ಗೆ ಬಂದು ಸೇರಿತು.
ಬೈಂದೂರು ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದಲೂ ರಾಷ್ಟ್ರಭಕ್ತರು ನೂರಾರು ಬಸ್ಗಳಲ್ಲಿ ಮತ್ತು ಇತರೆ ವಾಹನಗಳಲ್ಲಿ ಬಂದು ಜಮಾಯಿಸಿದ್ದರು. ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಕಂಡುಬಂದಿತು. ಮೆರವಣಿಗೆಯ ಉದ್ದಕ್ಕೂ ಈಶ್ವರಪ್ಪನವರಿಗೆ ಹಾಗೂ ಮೋದಿಯವರಿಗೆ ಜೈಕಾರ ಹಾಕಿದ್ದರು.
ಮೆರವಣಿಗೆಯಲ್ಲಿ ಮೋದಿ :
ಮೆರವಣಿಗೆಯಲ್ಲಿ ಮೋದಿ ತದ್ರೂಪಿಯೊಬ್ಬರು ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಗಮನಸೆಳೆದರು. ಥೇಟ್ ಮೋದಿಯಂತೆ ಕಂಡುಬಂದ ಅವರು, ಅದೇ ರೀತಿಯ ಹಾವಬಾವವನ್ನು ಪ್ರದರ್ಶಿಸಿದರು. ಮೋದಿಯನ್ನೇ ನೋಡಿದಂತೆ ಜನರು ಬೆರಗುಗಣ್ಣಿನಿಂದ ನೋಡಿದರು.
ವಿಶ್ವಾಸ್ ನಾಮಪತ್ರ ಸಲ್ಲಿಕೆ :
ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದು, ಅವರ ಪರವಾಗಿ ಮೊದಲಿಗೆ ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಒಟ್ಟು 3 ಸೆಟ್ಗಳಲ್ಲಿ ನಾಮಪತ್ರ ಸಲ್ಲಿಸಲಾಯಿತು.
ವಿಶ್ವಾಸ್ ನಾಮಪತ್ರ ಸಲ್ಲಿಸುವಾಗ ಮಾಜಿ ಮೇಯರ್ ಸುವರ್ಣ ಶಂಕರ್, ಗನ್ನಿ ಶಂಕರ್, ಭೂಪಾಲ್, ಶಿವಾಜಿ ಇದ್ದರು.
ಈಶ್ವರಪ್ಪ ನಾಮಪತ್ರ ಸಲ್ಲಿಕೆ:
ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಇಂದು 12.25ಕ್ಕೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಜಯಲಕ್ಷ್ಮಿ,ಮಾಜಿ ಸಚಿವ ಗೂಳಿ ಹಟ್ಟಿ ಶಂಕರ್, ಮಹಾಲಿಂಗಶಾಸ್ತ್ರಿ, ಉಮಾ ಇದ್ದರು.