ಶಿವಮೊಗ್ಗ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ೮ನೇ ಸ್ಥಾನ ಪಡೆದು ಕಳೆದ ವರ್ಷಕ್ಕಿಂತ ಉತ್ತಮ ಫಲಿತಾಂಶ ದಾಖಲಿಸಿದೆ.
ಈ ಬಾರಿಯೂ ಕೂಡ ಬಾಲಕಿಯರೂ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ೧೫,೩೪೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ. ೮೮.೫೮ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿ ಶೇ. ೮೩.೧೩ ರಷ್ಟು ಫಲಿತಾಂಶ ಬಂದಿತ್ತು. ಶೇಕಡವಾರು ಫಲಿತಾಂಶದಲ್ಲಿ ಗಣನೀಯ ಸಾಧನೆ ಮಾಡಿದೆ.
ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟದ ರ್ಯಾಂಕ್ ಪಡೆದುಕೊಂಡಿದ್ದಾರೆ.
ಶಿಕಾರಿಪುರದ ಕುಮದ್ವತಿ ಕಾಲೇಜಿನ ಪವನ್ ಎಂ.ಎಸ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ೬೦೦ ಅಂಕಗಳಿಗೆ ೫೯೬ ಅಂಕ ಪಡೆದಿದ್ದಾರೆ. ಈತ ಶಿಕಾರಿಪುರ ಪಟ್ಟಣ ನಿವಾಸಿ ಅನಿತಾ ಹಾಗೂ ಮಂಜುನಾಥ್ ಅವರ ಪುತ್ರ.
ನಗರದ ಡಿವಿಎಸ್(ಸ್ವತಂತ್ರ) ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚುಕ್ಕಿ ಕೆ.ಎಸ್. ಕಲಾ ವಿಭಾಗದಲ್ಲಿ ಒಟ್ಟು ೬೦೦ ಅಂಕಗಳಿಗೆ ೫೯೪ ಅಂಕ ಪಡೆದಿದ್ದಾರೆ. ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಇದಾಗಿದೆ. ಇವರು ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ಪೂರ್ಣಿಮಾ ಅವರ ಪುತ್ರಿಯಾಗಿದ್ದಾರೆ.
ನಗರದ ಪೇಸ್ ಕಾಲೇಜಿನ ಸಾತ್ವಿಕ್ ಕೆ.ವೈ. ವಿಜ್ಞಾನ ವಿಭಾಗದಲ್ಲಿ ೬೦೦ ಅಂಕಗಳಿಗೆ ೫೯೫ ಅಂಕ ಗಳಿಸಿ ರಾಜ್ಯಕ್ಕೆ ೪ನೇ ರ್ಯಾಂಕ್ ಪಡೆದಿದ್ದಾರೆ. ಮೂಲತಃ ಹೊಸನಗರ ತಾಲೂಕು ಕೋಡೂರು ಗ್ರಾಮದ ಕೃಷಿಕ ಯೋಗೇಶ್ ಮತ್ತು ಅಪರ್ಣಾ ದಂಪತಿಗಳ ಪುತ್ರರಾಗಿದ್ದಾರೆ.
ನಗರದ ಆದಿಚುಂಚನಗಿರಿ ವಿಜ್ಞಾನ ಪಿಯು ಕಾಲೇಜಿನ ಶರತ್ ವಿ.ಕೆ. ೫೯೦, ಸೃಷ್ಠಿ ೫೮೯, ಕೇಶವ್ ಜಿ ೫೮೮ ಅಂಕ ಪಡೆದಿದ್ದಾರೆ.