ಸಾಗರ:
ಬಿಜೆಪಿಯ ಕುಟುಂಬ ರಾಜಕಾರಣ, ಜಾತಿಗೆ ಮಣೆ ಹಾಕುತ್ತಿರುವುದರ ವಿರುದ್ದ ಕೆ.ಎಸ್.ಈಶ್ವರಪ್ಪ ಕಣಕ್ಕೆ ಇಳಿದಿದ್ದು, ಹಿಂದುತ್ವದ ಮೂಲ ಉಳಿಸಿಕೊಳ್ಳಲು ಈಶ್ವರಪ್ಪ ಗೆಲುವು ಅಗತ್ಯ ಎಂದು ರಾಷ್ಟ್ರಭಕ್ತ ಬಳಗದ ತಾಲೂಕು ಅಧ್ಯಕ್ಷ ಪ್ರಕಾಶ್ ಕುಂಠೆ ಹೇಳಿದರು.
ಸಾಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ಕುಂಠೆ, ರಾಷ್ಟ್ರಭಕ್ತ ಬಳಗವು ಈಶ್ವರಪ್ಪನವರ ಗೆಲುವಿಗೆ ಪಣತೊಟ್ಟು ಕೆಲಸ ಮಾಡುತ್ತಿದೆ. ಪ್ರಖರ ಹಿಂದುತ್ವವಾದಿಯಾಗಿರುವ ಕೆ.ಎಸ್.ಈಶ್ವರಪ್ಪ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಶ್ವರಪ್ಪ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬಳಿಕ ರಾಷ್ಟ್ರಭಕ್ತ ಬಳಗದ ಸದಸ್ಯರು ಕ್ಷೇತ್ರವ್ಯಾಪ್ತಿ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಈಶ್ವರಪ್ಪ ಪರ ಪ್ರಚಾರಕ್ಕೆ ಇಳಿದಿದ್ದಾರೆ. ದೇಶದಲ್ಲಿ ಹಿಂದುತ್ವದ ಪರವಾಗಿ ಇರುವ ಯಾವುದಾದರೂ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಕುಟುಂಬವೊಂದರ ಹಿಡಿತದಲ್ಲಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಹಂತಹಂತವಾಗಿ ಕೊಲ್ಲುವ ಕೆಲಸ ಮಾಡಲಾಗುತ್ತಿದೆ. ಇದನ್ನು ವಿರೋಧಿಸುವ ಹಿಂದುತ್ವವಾದಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಹಿಂದುತ್ವದ ಮೂಲ ಉಳಿಸಿಕೊಳ್ಳಲು ಈಶ್ವರಪ್ಪರ ಗೆಲುವು ಅಗತ್ಯವಾಗಿದೆ ಎಂದರು.
ಇಷ್ಟು ದಿನ ಮೋದಿಗಾಗಿ ಕೆಲಸ ಮಾಡುತ್ತಿದ್ದ ನಮ್ಮ ತಂಡವು ರಾಷ್ಟಭಕ್ತ ಬಳಗದಲ್ಲಿ ವಿಲೀನಗೊಳಿಸಲಾಗಿದೆ. ಈಶ್ವರಪ್ಪ ಗೆದ್ದ ನಂತರ ಅವರು ಪುನಃ ಬಿಜೆಪಿಗೆ ಸೇರ್ಪಡೆಗೊಳುತ್ತಾರೆ. ಇದರಲ್ಲಿ ಯಾವ ಅನುಮಾನವೂ ಬೇಡ. ಅವರ ಉದ್ದೇಶ ಅಪ್ಪ-ಮಕ್ಕಳ ಕೈಯಲ್ಲಿ ಸಿಲುಕಿರುವ ಪಕ್ಷವನ್ನು ಮುಕ್ತಗೊಳಿಸುವುದು. ಜೊತೆಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವುದೇ ಅವರ ಸಂಕಲ್ಪವಾಗಿದೆ. ಇದಕ್ಕಾಗಿ ಅವರು ಸ್ಪರ್ಧೆ ಮಾಡುತ್ತಿದ್ದು, ಅವರನ್ನು ಬೆಂಬಲಿಸುವ ಮೂಲಕ ಹೆಚ್ಚಿನ ಅಂತರದಲ್ಲಿ ಅವರನ್ನು ಗೆಲ್ಲಿಸಿ, ದೆಹಲಿಗೆ ಕಳುಹಿಸಿಕೊಬೇಕಿದೆ ಎಂದು ಕರೆ ನೀಡಿದರು.
ಬಳಗದ ವಜ್ರಮುನಿ ಎಚ್.ಜಿ. ಮಾತನಾಡಿ, ಏ.6ರಂದು ಬೆಳಗ್ಗೆ 10.30ಕ್ಕೆ ಭದ್ರಕಾಳಿ ಸಭಾಭವನದಲ್ಲಿ ರಾಷ್ಟ್ರಭಕ್ತ ಬಳಗದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕ ಪ್ರಮುಖರು ಸೇರಿದಂತೆ 8 ಸಾವಿರ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ಷೇತ್ರದಾದ್ಯಂತ ಲಕ್ಷಾಂತರ ಮತದಾರರು ಈಶ್ವರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿದರು.
ಸುದ್ದಿಗೋಷ್ಠಿಯಲ್ಲಿ ಸತೀಶ್ ಗೌಡ, ಕಸ್ತೂರಿ ಸಾಗರ್, ರಜನೀಶ್ ಹಕ್ರೆ, ನಾಗರಾಜ್ ಮೊಗವೀರ, ಗೋಪಾಲ, ಪ್ರಶಾಂತ ಹೆಗಡೆ, ಗೌರಿಶಂಕರ್, ಅರುಣಾ ವಿನಾಯಕ್ , ಅಣ್ಣಪ್ಪ, ಸವಿತಾ, ಉಮೇಶ್ ಚೌಟಗಿ, ಗೋಪಾಲ್, ರವಿ ಬಿಳಿಸಿರಿ ಇತರರು ಇದ್ದರು.