ಸಾಗರ(ಶಿವಮೊಗ್ಗ),ಏ.೦೪:ಗ್ರಾಮಸ್ಥರ ಮೇಲೆ ಅನೇಕ ಬಾರಿ ಹಲ್ಲೆ ಮಾಡಿರುವ, ಗ್ರಾಮದಲ್ಲಿ ನಿರಂತರ ಶಾಂತಿಭಂಗ ಮಾಡುತ್ತಿರುವ ಹಾಗೂ ೦೩-೦೪-೨೦೨೪ ರಂದು ಹೆನೆಗೆರೆ ವಾಸಿಯಾದ ರವಿ ಹೆಗಡೆ ಎಂಬುವವರನ್ನು ಕೊಲೆ ಮಾಡಲು ಯತ್ನಿಸಿರುವ ಬಂಗಾರಪ್ಪ ಬಿನ್ ಕೆರಿಯಪ್ಪ ಎಂಬುವವನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಹಾಗೂ ಗಡಿಪಾರು ಮಾಡುವಂತೆ ಗ್ರಾಮಸ್ಥರು ಸಾಗರ ಪೊಲೀಸ್ ಉಪ ಅಧೀಕ್ಷಕರನ್ನು ಭೇಟಿಯಾಗಿ ಪ್ರತಿಭಟಿಸಿ ಒತ್ತಾಯಿಸಿದರು.
ಮನವಿಯಲ್ಲಿ ನಮ್ಮ ಗ್ರಾಮದ ವಾಸಿಯಾದ ಬಂಗಾರಪ್ಪ ಬಿನ್ ಕೆರಿಯಪ್ಪ, ಸುಮಾರು ೩೮ ವರ್ಷ, ಈಡಿಗ ಜನಾಂಗ, ಇವನು ಕಳೆದ ಕೆಲವು ವರ್ಷಗಳಿಂದ ಗ್ರಾಮದ ವಾಸಿಗಳಾದ ಪ್ರಶಾಂತ ಬಿನ್ ಕೃಷ್ಣಪ್ಪ, ಜಂಬೂರು ಚೌಡಪ್ಪ ಬಿನ್ ಕೆರಿಯಪ್ಪ, ಬಾಬು ಬಿನ್ ಗೋವಿಂದಪ್ಪ ಎಂಬುವವರ ಮೇಲೆ ಈಗಾಗಲೇ ಹಲ್ಲೆ ಮಾಡಿ ಜೀವ ಬೆದರಿಕೆಯನ್ನು ಹಾಕಿರುತ್ತಾನೆ. ಊರಿನ ದೇವಸ್ಥಾನದ ಅಧ್ಯಕ್ಷರಾದ ವೆಂಕಟರಮಣ ಹೆಗಡೆ ಇವರ ಮೇಲೆ ಈ ಹಿಂದೆ ಹಲ್ಲೆ ಮಾಡಿದ್ದು, ಪ್ರತಿ ಹಂತದಲ್ಲೂ ಸಹ ಆರೋಪಿಯ ಮೇಲೆ ಗ್ರಾಮಸ್ಥರು ದೂರನ್ನು ನೀಡಿದ್ದು, ಪೊಲೀಸ್ ಇಲಾಖೆ ಯಾವತ್ತೂ ಬಂಧಿಸುವ ಪ್ರಯತ್ನವನ್ನು ಮಾಡಿರುವುದಿಲ್ಲ ಎಂದು ದೂರಿದರು.
ದಿ:೦೩-೦೪-೨೦೨೪ ರಂದು ನಮ್ಮ ಗ್ರಾಮದ ವಾಸಿಯಾದ ರವಿ ಹೆಗಡೆ ಎಂಬುವವರ ಮೇಲೆ ಜಮೀನಿನ ಸಂಬಂಧ ಕ್ಷುಲ್ಲಕ ಕಾರಣಕ್ಕೆ ಕತ್ತಿಯಿಂದ ಕಡಿದು ಕೊಲೆಗೆ ಪ್ರಯತ್ನಿಸಿರುತ್ತಾನೆ. ಈ ಸಂಬಂಧ ರವಿ ಹೆಗಡೆ ಇವರು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆಯನ್ನು ಪಡೆದು ಆರೋಪಿಯ ವಿರುದ್ದ ದೂರನ್ನು ನೀಡಿರುತ್ತಾರೆ.
ಬಂಗಾರಪ್ಪ ಬಿನ್ ಕೆರಿಯಪ್ಪ ಇವನು ಬಿ.ಹೆಚ್ ರಸ್ತೆಯಿಂದ ಕಲ್ಲೊಪ್ಪ ಮಾರ್ಗವಾಗಿ ಹೆನಗೆರೆಗೆ ಇರುವ ಸಂಪರ್ಕ ರಸ್ತೆಯಲ್ಲಿ ಮುಳ್ಳನ್ನು ಹಾಕುವುದು, ರಸ್ತೆಯಲ್ಲಿ ಓಡಾಡುವ ಗ್ರಾಮಸ್ಥರಿಗೆ ವಿನಾ ಕಾರಣ ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ, ನಿರಂತರವಾಗಿ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಾ ಬಂದಿದ್ದು, ಗ್ರಾಮಸ್ಥರು ಏಕಾಂಗಿಯಾಗಿ ಓಡಾಡಲು ಭಯ ಪಡುವಂತಹ ಶಾಂತಿಭಂಗ ಉಂಟು ಮಾಡುವ ವ್ಯಕ್ತಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಮೊನ್ನೆ ನಡೆದ ಘಟನೆಯಿಂದ ಗ್ರಾಮಸ್ಥರು ಭಯಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಗ್ರಾಮಸ್ಥರ ಕೊಲೆ ಮಾಡುವ ಸಾಧ್ಯತೆಯನ್ನು ಸಹ ಅಲ್ಲಗಳೆಯುವಂತಿಲ್ಲ.
ಆದ್ದರಿಂದ ತಾವುಗಳು, ಗ್ರಾಮಸ್ಥರ ಮೇಲೆ ಅನೇಕ ಬಾರಿ ಹಲ್ಲೆ ಮಾಡಿರುವ, ಗ್ರಾಮದಲ್ಲಿ ನಿರಂತರ ಶಾಂತಿಭಂಗ ಮಾಡುತ್ತಿರುವ ಹಾಗೂ ದಿ:೦೩-೦೪-೨೦೨೪ ರಂದು ಗ್ರಾಮದ ವಾಸಿಯಾದ ರವಿ ಹೆಗಡೆ ಎಂಬುವವರನ್ನು ಕೊಲೆ ಮಾಡಲು ಯತ್ನಿಸಿರುವ ಬಂಗಾರಪ್ಪ ಬಿನ್ ಕೆರಿಯಪ್ಪ ಎಂಬುವವನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಹಾಗೂ ಗಡಿಪಾರು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಸ್ಥರ ಅಹವಾಲು ಆಲಿಸಿದ ಸಾಗರದ ಡಿವೈಎಸ್ಪಿ ಪ್ರತಿಕ್ರಿಯಿಸಿ ಬಂಗಾರಪ್ಪ ಹಲ್ಲೆ ಮಾಡಿರುವ ಕುರಿತು ಈಗ ನನ್ನ ಗಮನಕ್ಕೆ ಬಂದಿದೆ.ಸ್ಥಳ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಊರಿನ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ,ಗ್ರಾಮಸೃಉಗಳಾದ ವೆಂಕಟರಮಣ ಭಟ್,ಗಣಪತಿ ಹೆನೆಗೆರೆ,ಗ್ರಾಮಪಂಚಾಯಿತಿ ಸದಸ್ಯ ಮಂಜಪ್ಪ,ಶ್ರೀನಿವಾಸ್,ಚೌಡಪ್ಪ ಗ್ರಾಮ ಪಂಚಾಯಿತಿ ಸದಸ್ಯ, ಸುಭಾಶ್,ನಾಗರಾಜ,ಬಾಬು ಮೊದಲಾದವರು ಉಪಸ್ಥಿತರಿದ್ದರು.