ಶಿವಮೊಗ್ಗ: ಜಿಲ್ಲಾ ವಕೀಲರ ಸಂಘ ಹಾಗೂ ಜಿ.ಎಸ್.ನಾಗರಾಜ ಅವರ ಕಿರಿಯ ವಕೀಲರ ಬಳಗದಿಂದ ಏ.06 ರ ಶನಿವಾರ ಸಂಜೆ 06:00 ಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಜಿ.ಎಸ್.ನಾಗರಾಜ ಅವರ ವಕೀಲಿ ವೃತ್ತಿ ಬದುಕಿನ 50 ವರ್ಷ ಪೂರೈಸಿದ ಸಂಭ್ರಮದಲ್ಲಿ ‘ವೃತ್ತಿ ಜೀವನ ಸಾರ್ಥಕತೆ : 50’ ವಿಶೇಷ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿ.ಎಸ್.ಎನ್ ಕಿರಿಯ ವಕೀಲರ ಬಳಗದ ಸದಸ್ಯರಾದ ನಾಗೇಶನ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಕಾರ್ಯಕ್ರಮವನ್ನು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಉದ್ಘಾಟಿಸಲಿದ್ದು, ಮಾಜಿ ಸಚಿವರಾದ ಪ್ರೊ.ಬಿ.ಕೆ.ಚಂದ್ರಶೇಖರ್ ಹಾಗೂ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅಭಿನಂದನಾ ಮತುಗಳನ್ನಾಡಲಿದ್ದಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಬಿ.ಜಿ.ಶಿವಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವಕೀಲರಾದ ಎನ್.ದೇವೇಂದ್ರಪ್ಪ, ಕೆ.ಬಸಪ್ಪಗೌಡ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಉಪಸ್ಥಿತರಿರುವರು.
31-05-1968 ರಂದು ವಕೀಲರಾಗಿ ನೊಂದಾಯಿಸಿಕೊಂಡ ಜಿ.ಎಸ್.ನಾಗರಾಜ ಅವರು, ಪ್ರಖ್ಯಾತ ವಕೀಲರಾಗಿದ್ದ ಮಹಿಷಿ ನರಸಿಂಹಮೂರ್ತಿ ಅವರ ಕಛೇರಿಯಲ್ಲಿ ಕಿರಿಯ ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿದರು. ಸಿವಿಲ್ ಕ್ರಿಮಿನಲ್ ಕಾರ್ಮಿಕ ವಿಭಾಗದಲ್ಲಿ ವಿಶೇಷ ಪರಿಣಿತಿ ಪಡೆದು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಪ್ರಮುಖ ಕೇಸ್ಗಳನ್ನು ನಿರ್ವಹಿಸುವ ಮೂಲಕ ನೊಂದ ಜೀವಗಳಿಗೆ ನ್ಯಾಯ ಒದಗಿಸಿದ್ದಾರೆ. ಭದ್ರಾವತಿಯ ನಾಗಸಮುದ್ರದ ಗೋಲಿಬಾರ್ನಲ್ಲಿ ರೈತರ ಹತ್ಯೆ ಕೇಸ್ ಕುರಿತ ಸರ್ಕಾರದ ತನಿಖಾ ಆಯೋಗದ ಮುಂದೆ ರೈತ ಸಂಘದ ಪರವಾಗಿ, ಹೊನ್ನಾಳಿಯ ಚುನಾವಣೆ ಸಂದರ್ಭದಲ್ಲಿ ಗೊಲಿಬಾರ್ ನಡೆದಾಗ ಸರ್ಕಾರದ ತನಿಖಾ ಆಯೋಗದ ಮುಂದೆ ಪೊಲೀಸರ ಪರವಾಗಿ ಹಾಗೂ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ತಡೆಯಲು ಹೋದ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತ ಸರ್ಕಾರದ ತನಿಖಾ ಆಯೋಗದ ಮುಂದೆ ಪೊಲೀಸರ ಪರವಾಗಿ ವಾದ ಮಂಡಿಸಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಸಂಘಟಿಸಿ ವಿದ್ಯಾರ್ಥಿಗಳ ಪರ ಅನೇಕ ಹೋರಾಟದಲ್ಲಿ ಭಾಗವಹಿಸಿ, ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ಪಡೆದು ಕಾರ್ಮಿಕ ಹಾಗೂ ರೈತ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಗೇಣಿದಾರರಿಗೆ ಭೂಹಕ್ಕಿನ ಪತ್ರ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶಿವಮೊಗ್ಗ ಜಿಲ್ಲೆಯ ನ್ಯಾಯವಾದಿ ಸಂಘದ ಕಾರ್ಯದರ್ಶಿಯಾಗಿ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ, ಅಂದಿನ ಸಂಯುಕ್ತ ರಂಗದ ಸಕ್ರಿಯ ಕಾರ್ಯಕರ್ತರಾಗಿ, ಶಿವಮೊಗ್ಗ ಬಸವನಗುಡಿ-ಜಯನಗರ ವಾರ್ಡ್ ನಗರಸಭಾ ಸದಸ್ಯರಾಗಿ, ಶಿವಮೊಗ್ಗ ಕರ್ನಾಟಕ ಸಂಘದ ಸದಸ್ಯರಾಗಿ, ಶಿವಮೊಗ್ಗ ಹಾಗೂ ಬೆಂಗಳೂರು ಹೋಟೆಲ್ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ, ಶಿವಮೊಗ್ಗ ಮೋಟಾರ್ ವಕರ್ಸ್ ಕಾರ್ಮಿಕರ ವಿಭಾಗದ ಕಾರ್ಯದರ್ಶಿಯಾಗಿ, ಕೆಎಸ್ಆರ್ಟಿಸಿ ಶಿವಮೊಗ್ಗ ಘಟಕದ ವಕರ್ಸ್ ಯೂನಿಯನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಶಿವಮೊಗ್ಗದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಾರತ-ಚೀನಾ ಮೈತ್ರಿ ಸಂಘದ ರಾಜ್ಯಾಧ್ಯಕ್ಷರಾಗಿ, ನಂತರ ಭಾರತೀಯ ಅಧ್ಯಕ್ಷರಾಗಿ ಅಂತರಾಷ್ಟ್ರೀಯ ಮಟ್ಟಕ್ಕೆ ತಮ್ಮ ಸೇವೆಯನ್ನು ವಿಸ್ತರಿಸಿ ಕೊಂಡಿದ್ದಾರೆ. ಮಲೇಶಿಯಾ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಕಾನೂನು ಪ್ರಾಧ್ಯಾಪಕರು ಮತ್ತು ನ್ಯಾಯವಾದಿಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಬಿ.ಜಿ.ಶಿವಮೂರ್ತಿ, ಕಿರಿಯ ವಕೀಲರ ಬಳಗದ ಸದಸ್ಯರಾದ ದೇವೇಂದ್ರಪ್ಪ, ಅನಂತದತ್ತಾ, ಅಣ್ಣಪ್ಪ, ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.