ಸಾಗರ : ಪ್ರಸ್ತುತ ಸನ್ನಿವೇಶದಲ್ಲಿ ಸುಮಾರು ಒಂದು ಲಕ್ಷ ಮತಗಳ ಅಂತರದಿಂದ ಜಯಗಳಿಸುವ ವಾತಾವರಣ ಇದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೆ ಗೆಲುವಿನ ಅಂತರ ಇನ್ನಷ್ಟು ಹೆಚ್ಚುತ್ತದೆ ಎಂದು ಮಾಜಿ ಸಚಿವ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ತಾಲ್ಲೂಕಿನ ಕಾರ್ಗಲ್‌ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಮುಖಂಡರನ್ನು ಭೇಟಿಯಾಗಿ, ಸಾಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಕ್ಷಾತೀತವಾಗಿ ನನ್ನ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಅಮಿತ್ ಷಾ ಅವರೇ ಇನ್ನು ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಬೇಡಿ ಎಂದು ಪಕ್ಷದ ಪ್ರಮುಖರಿಗೆ ಕರೆ ನೀಡಿದ್ದಾರೆ. ಇದು ನನಗೆ ಸಂತೋಷ ತಂದಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾದಾಗ ಸಾಕಷ್ಟು ಪ್ರಮುಖರು ನನ್ನನ್ನು ಭೇಟಿಯಾಗಿ ಕಣದಿಂದ ಹಿಂದೆ ಸರಿಯುವಂತೆ ಒತ್ತಾಯ ಮಾಡಿದ್ದರು. ನಾನು ಯಾರ ಒತ್ತಡಕ್ಕೂ ಮಣಿಯಲಿಲ್ಲ. ಈಗಾಗಲೆ ಚುನಾವಣೆ ಗೆಲುವಿಗಾಗಿ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾನ್ಯ ಜನರು ಈ ಬಾರಿ ಈಶ್ವರಪ್ಪ ಅವರನ್ನು ಗೆಲ್ಲಿಸಬೇಕು ಎಂದು ತೀರ್ಮಾನಿಸಿದ್ದಾರೆ. ಇನ್ನೂ ಎಲ್ಲರನ್ನೂ ಭೇಟಿ ಮಾಡಲು ಆಗಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ ಶುದ್ದೀಕರಣಕ್ಕಾಗಿ ನನ್ನ ಗೆಲುವು ಅಗತ್ಯವಾಗಿದೆ. ನರೇಂದ್ರ ಮೋದಿಯವರು ಜಿಲ್ಲೆಗೆ ನೀಡಿದ ಕೊಡುಗೆ ಅಪಾರವಾಗಿದೆ. ಇನ್ನಷ್ಟು ಅಭಿವೃದ್ದಿ ಯೋಜನೆಗಳನ್ನು ಕೇಂದ್ರದಿಂದ ತರಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.
ಮತದಾರರ ಬಳಿ ನನಗೆ ಆಗಿರುವ ಅನ್ಯಾಯವನ್ನು ತಿಳಿಸಿ ಹೇಳಿ ಮತಯಾಚನೆ ಮಾಡಲಾಗುತ್ತಿದೆ. ಹಿಂದುತ್ವವನ್ನು ಮೂಲೆಗುಂಪು ಮಾಡಲಾಗುತ್ತಿದೆ. ಸಿ.ಟಿ.ರವಿ, ಬಸವರಾಜ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ ಅವರನ್ನು ಪಕ್ಕಕ್ಕೆ ಸರಿಸಲಾಗಿದೆ. ಹಿಂದುತ್ವ ಉಳಿಯಬೇಕು. ಹೇಗೆ ದೇಶದಲ್ಲಿ ಕಾಂಗ್ರೇಸ್ ಪಕ್ಷ ಕುಟುಂಬವೊಂದರ ಕೈನಲ್ಲಿ ಇದೆಯೋ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಯಡಿಯೂರಪ್ಪ ಕುಟುಂಬದ ಕೈನಲ್ಲಿದೆ. ಅದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ವಿ.ಕೃಷ್ಣಮೂರ್ತಿ, ಎಸ್.ಎಲ್.ಮಂಜುನಾಥ್, ಪ್ರಕಾಶ್ ಕುಂಠೆ, ಗಣೇಶ್, ಸತೀಶ್ ಗೌಡ ಅದರಂತೆ ಇನ್ನಿತರರು ಹಾಜರಿದ್ದರು.